ಸಿದ್ದಾಪುರ, ಜೂ. 30: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸದ ವಿಲೇವಾರಿಗೆ ಜಾಗ ನೀಡಬೇಕೆಂದು ಒತ್ತಾಯಿಸಿ ತಾ. 6 ರಂದು ಬಂದ್ ಕರೆ ನೀಡಲಾಗಿದ್ದು, ಜನಪ್ರತಿನಿಧಿಗಳು ಸಾಮೂಹಿಕ ರಾಜಿನಾಮೆ ನೀಡುವಂತೆ ತೀರ್ಮಾನಿಸಲಾಯಿತು.ನೆಲ್ಯಹುದಿಕೇರಿ ಗ್ರಾ.ಪಂ ಸಭಾಂಗಣದಲ್ಲಿ ಕರೆಯಲಾಗಿದ್ದ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಹಲವು ವರ್ಷದ ಜ್ವಲಂತ ಸಮಸ್ಯೆಯ ಹೋರಾಟಕ್ಕೆ ಇದೀಗ ವೇದಿಕೆ ಸಜ್ಜಾಗಿದೆ. ನೆಲ್ಯಹುದಿಕೇರಿ ಪಟ್ಟಣ ಸೇರಿದಂತೆ ಎಂ.ಜಿ. ಕಾಲೋನಿ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಕಸ ಹಾಗೂ ತ್ಯಾಜ್ಯ ವಸ್ತುಗಳು ಕೊಳೆತು ದುರ್ನಾತ ಬೀರುತ್ತಿದ್ದು ಇದರಿಂದಾಗಿ ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ನೆಲ್ಯಹುದಿಕೇರಿ ಗ್ರಾಮಸ್ಥರಾದ ಹೊಸಮನೆ ವಸಂತ್ ಕುಮಾರ್ ಮಾತನಾಡಿ, ನೆಲ್ಯಹುದಿಕೇರಿ ಪಟ್ಟಣದ ರಸ್ತೆ ಬದಿಯಲ್ಲಿ ಹಸಿ ಮೀನು ಮಾರಾಟ ಮಳಿಗೆಯ ಸಮೀಪದಲ್ಲಿ ಹೊರ ಊರಿನವರು ಕೂಡ ಕಸ ಹಾಗೂ ತ್ಯಾಜ್ಯಗಳನ್ನು ಸುರಿಯುತ್ತಿದ್ದು ಇದರಿಂದ

(ಮೊದಲ ಪುಟದಿಂದ) ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆ ಇದ್ದು ಕೂಡಲೇ ಗ್ರಾಮ ಪಂಚಾಯಿತಿಯು ಕಸ ವಿಲೇವಾರಿ ಮಾಡಲು ಸೂಕ್ತ ಜಾಗವನ್ನು ಗುರುತಿಸಬೇಕೆಂದು ಒತ್ತಾಯಿಸಿದರು. ಇದಲ್ಲದೇ ರಸ್ತೆ ಬದಿಯಲ್ಲಿ ಕಸ ಸುರಿಯುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ ಪರಿಸರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪರಿಸರ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು. ಇದೇ ಸಂದಭರ್Àದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಮಾತನಾಡಿ ನೆಲ್ಯಹುದಿಕೇರಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆ ಇದ್ದು ಜಾಗವನ್ನು ಒದಗಿಸಿಕೊಡುವಂತೆ ಕಳೆದ ಹಲವು ವರ್ಷಗಳಿಂದ ಮನವಿ ಮಾಡಿಕೊಂಡರೂ ಜಿಲ್ಲಾಡಳಿತ ಈವರೆಗೂ ಜಾಗವನ್ನು ಒದಗಿಸಿಕೊಡದೇ ನಿರ್ಲಕ್ಷ್ಯ ವಹಿಸುತ್ತಿರುವದು ಖಂಡನೀಯ. ಜಿಲ್ಲಾಡಳಿತ ಕಸ ವಿಲೇವಾರಿಗೆ ಸೂಕ್ತ ಜಾಗವನ್ನು ಒದಗಿಸಿಕೊಡದಿದ್ದಲ್ಲಿ ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳು, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಸದಸ್ಯರುಗಳು ಸಾಮೂಹಿಕವಾಗಿ ರಾಜಿನಾಮೆಯನ್ನು ನೀಡುತ್ತೇವೆಂದು ಎಚ್ಚರಿಕೆ ನೀಡಿದರು. ಅಲ್ಲದೆ ಕಸ ವಿಲೇವಾರಿಗೆ ಸೂಕ್ತ ಜಾಗವನ್ನು ಜಿಲ್ಲಾಧಿಕಾರಿಗಳು ಒದಗಿಸಿಕೊಡಬೇಕೆಂದು ಒತ್ತಾಯಿಸಿ ತಾ. 6 ರಂದು ಕರೆ ನೀಡಿರುವ ಬಂದ್‍ಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುಂಡ ಸ್ವಾಮಿ ಮಾತನಾಡಿ ಕಸ ಹಾಗೂ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಗ್ರಾ.ಪಂ ಅನುದಾನದಿಂದ ಎಂ.ಜಿ ಕಾಲೋನಿಯ ಪ್ರತಿ ಮನೆಗಳಿಗೂ ತಲಾ ಒಂದು ಬಕೆಟ್ ಹಾಗೂ ಒಂದು ಚೀಲ ನೀಡಲಾಗುವದು. ನೆಲ್ಯಹುದಿಕೇರಿಯ ದ್ವನಿವರ್ಧಕಗಳ ಮೂಲಕ ಜನರಿಗೆ ಸ್ವಚ್ಚತೆ ಹಾಗೂ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಲಾಗುವದು ಎಂದರು.

ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ, 2014 ರಲ್ಲಿ ಬೆಟ್ಟದಕಾಡು ಸರ್ವೆ ನಂ. 160/1 ರಲ್ಲಿ ಪೈಸಾರಿ ಜಾಗವಿದ್ದು, ಅದನ್ನು ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಂಡು ಸದರಿ ಜಾಗದಲ್ಲಿ ಕಸ ವಿಲೇವಾರಿಗೆ ಜಾಗ ನೀಡುವದಾಗಿ ಭರವಸೆಯನ್ನು ನೀಡಲಾಗಿತ್ತು. ಆದರೆ ಇದೀಗ ವರ್ಷಗಳೇ ಕಳೆದರೂ ಈವರೆಗೂ ಯಾವದೇ ಪ್ರಕ್ರಿಯೆ ನಡೆಯದೆ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.

ಗ್ರಾ.ಪಂ ಸದಸ್ಯ ಸಾಬು ಮಾತನಾಡಿ, ಗ್ರಾ.ಪಂ ವತಿಯಿಂದ ಪಟ್ಟಣದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಬೇಕು. ಇದರಿಂದಾಗಿ ಪಟ್ಟಣದಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವವರನ್ನು ಪತ್ತೆಹಚ್ಚಬಹುದು ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ತಾ.ಪಂ. ಸದಸ್ಯೆ ಸುಹದಾ ಅಶ್ರಫ್, ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ, ಗ್ರಾ.ಪಂ ಸದಸ್ಯರು, ಗ್ರಾಮಸ್ಥರಾದ ಮಹಮ್ಮದ್, ಮಣಿ, ತೆರಂಬಳ್ಳು ಸುಧೀರ್, ಕುಮಾರ್, ರಜಾಕ್, ಶಿವದಾಸ್, ಸುಕುಮಾರ, ಡಾಮಿನಸ್ ಯುವ ಸಂಘದ ಸದಸ್ಯರು ಸೇರಿದಂತೆ ವಿವಿಧ ಮಹಿಳಾ ಸಂಘದ ಪ್ರತಿನಿಧಿಗಳು ಹಾಜರಿದ್ದರು.