ಮಡಿಕೇರಿ, ಜೂ. 30: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವು ಕೊನೆಗೂ ದಕ್ಷಿಣ ಕೊಡಗಿನ ಶ್ರೀಮಂಗಲ ಜಿ.ಪಂ. ಸದಸ್ಯ ಹಾಗೂ ಕುಟ್ಟ ಗ್ರಾ.ಪಂ. ಮಾಜಿ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಅವರಿಗೆ ಒಲಿದಿದೆ.

ಯುವ ಮುಂದಾಳು 41 ವರ್ಷದ ತರುಣರಾದ ಯುವ ಮುಖಂಡ ಮುಕ್ಕಾಟಿರ ಶಿವು ಮಾದಪ್ಪ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಿ ಇಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್ ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಈ ಆದೇಶದ ಪ್ರತಿಯನ್ನು ಇಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ನೂತನ ಅಧ್ಯಕ್ಷರಿಗೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಹೊಂದಿರುವ ಹುಸೇನ್, ಸಚಿವರ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರುಗಳಿದ್ದು, ಶಿವು ಮಾದಪ್ಪ ಅವರಿಗೆ ಅಭಿನಂದಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮುಕ್ಕಾಟಿರ ಶಿವು ಮಾದಪ್ಪ ಅವರನ್ನು ಅಭಿನಂದಿಸಿರುವ ಮೇಲ್ಮನೆ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು, ಜಿಲ್ಲೆಯಲ್ಲಿ ಹಿರಿಯರು ಮತ್ತು ಕಿರಿಯರು ಸಹಿತ ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಬಲಿಷ್ಠ ಗೊಳಿಸುವಂತಾಗಲಿ ಎಂದು ಆಶಿಸಿದರು. ಅಲ್ಲದೆ, ದಕ್ಷಿಣ ಕೊಡಗಿನ ಕುಟ್ಟದಂತಹ ಗ್ರಾಮೀಣ ಭಾಗದಲ್ಲಿ ಶಿವು ಮಾದಪ್ಪ ಅವರ ತಂದೆ ಮುಕ್ಕಾಟಿರ ಬಾಲಸುಬ್ರಮಣ್ಯ ಅವರು ಬದುಕಿರುವಷ್ಟು ಕಾಲವೂ ಕಾಂಗ್ರೆಸ್‍ಗಾಗಿ ಶ್ರಮಿಸಿದ್ದರೆಂದು ವೀಣಾ ಅವರು ನೆನಪಿಸಿಕೊಂಡರು.

ಕಿರು ಪರಿಚಯ : ಹಾಲಿ ಜಿ.ಪಂ. ಸದಸ್ಯರೂ ಆಗಿರುವ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಅವರು, ಕುಟ್ಟ ಗ್ರಾಮದಲ್ಲಿ 9.7.1976ರಲ್ಲಿ ಜನಿಸಿದ್ದು, ತಂದೆ ಬಾಲಸುಬ್ರಮಣ್ಯ ಹಾಗೂ ತಾಯಿ ಶಾಂತಿ ಅಕ್ಕಮ್ಮ ದಂಪತಿಯ ಐವರು ಮಕ್ಕಳಲ್ಲಿ ಇವರು ಮಧ್ಯದವರು. ಮೂವರು ಸಹೋದರಿಯರು

(ಮೊದಲ ಪುಟದಿಂದ) ಹಾಗೂ ಓರ್ವ ಕಿರಿಯ ಸಹೋದರನಿದ್ದು ಕೃಷಿ ಕುಟುಂಬ.

ಬಿ.ಎ. ಪದವೀಧರರಾಗಿರುವ ಶಿವು ಮಾದಪ್ಪ ಕೃಷಿ ಚಟುವಟಿಕೆಯೊಂದಿಗೆ ತಂದೆಯ ಹಾದಿಯಲ್ಲಿ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದು, ಕುಟ್ಟ ಸ್ಥಾನೀಯ ಸಮಿತಿ ಹಾಗೂ ವಲಯ ಅಧ್ಯಕ್ಷರಾಗಿ, ಅಲ್ಲಿನ ಗ್ರಾ.ಪಂ. ಸದಸ್ಯ ಮತ್ತು ಅಧ್ಯಕ್ಷರಾಗಿ ಅನುಭವದೊಂದಿಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ದುಡಿದಿದ್ದಾರೆ.

ಪ್ರಸಕ್ತ ಶ್ರೀಮಂಗಲ ಕ್ಷೇತ್ರದಿಂದ ಜಿ.ಪಂ. ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವದರೊಂದಿಗೆ ಕಾಂಗ್ರೆಸ್‍ನ ಜಿಲ್ಲಾ ಹೊಣೆಗಾರಿಕೆ ಇವರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮಡಿಕೇರಿ ಹಿರಿಯ ವಕೀಲ ಪಳಂಗಂಡ ಸುಬ್ಬಯ್ಯ ಅವರ ಪುತ್ರಿ ಅರ್ಚನಾ (ಕಾವೇರಿ) ಇವರ ಪತ್ನಿಯಾಗಿದ್ದು, ಮೂವರು ಪುತ್ರಿಯರ ತಂದೆ.

ಹರ್ಷ ತಂದಿದೆ

ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಶಿವು ಮಾದಪ್ಪ ಅವರನ್ನು, ‘ಶಕ್ತಿ’ ಸಂಪರ್ಕಿಸಿದಾಗ ನೂತನ ಹೊಣೆಗಾರಿಕೆ ಬಗ್ಗೆ ಹರ್ಷ ತಂದಿದೆ ಎಂದರಲ್ಲದೆ, ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷರಾಗಿರುವ ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾಂಗ್ರೆಸ್‍ನ ಎಲ್ಲಾ ಹಿರಿಯರಿಗೆ ಹಾಗೂ ಕಾರ್ಯತರ್ಕರಿಗೆ ಚಿರಋಣಿಯಾಗಿರುವದಾಗಿ ನುಡಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಾದ್ಯಂತ ಬಲಿಷ್ಠಗೊಳಿಸಲು ಶ್ರಮಿಸುವದಾಗಿ ವಿಶ್ವಾಸದಿಂದ ನುಡಿದ ಶಿವು ಮಾದಪ್ಪ, ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಲು ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬುವ ಕೆಲಸಕ್ಕೆ ಮೊದಲ ಆದ್ಯತೆ ಎಂದರು.