ಮಡಿಕೇರಿ, ಜೂ. 30: ನಮ್ಮ ಪುಟ್ಟ ಜಿಲ್ಲೆಯಾಗಿರುವ ಈ ಸುಂದರ ಕೊಡಗಿನಲ್ಲಿ ಇತ್ತೀಚೆಗೆ ದೇಶದೆಲ್ಲೆಡೆ ನಡೆಸಲಾದ ಕಾಡಾನೆಗಳ ಗಣತಿ ಸಂದರ್ಭ, 300ಕ್ಕೂ ಅಧಿಕ ಕಾಡಾನೆಗಳು ಕಾವೇರಿ ನಾಡಿನಲ್ಲ್ಲಿ ವೃದ್ಧಿಯಾಗಿರುವದು ಕಂಡು ಬಂದಿದೆ. ಸರಕಾರಿ ನಿಯೋಜಿತ ಎ.ಎನ್.ಸಿ.ಎಫ್ (ಏಷಿಯನ್ ನೇಚರ್ ಕನ್ಸರ್‍ವೇಷನ್ ಫೌಂಡೇಷನ್) ಟ್ರಸ್ಟ್‍ನಿಂದ ಈ ಸರ್ವೆ ಕಾರ್ಯ ನಡೆದಿದೆ.ಜಿಲ್ಲೆಯೆಲ್ಲೆಡೆ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಮೇಲಿಂದ ಮೇಲೆ ಮಾನವನೊಂದಿಗೆ ಕಾಡಾನೆಗಳ ಸಂಘರ್ಷದ ಸುದ್ದಿಗಳು ಬಿತ್ತರಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಸ್ಫೋಟಕ ಮಾಹಿತಿ ಲಭಿಸಿದೆ. ವಿಶೇಷವಾಗಿ ಕೊಡಗಿನ ಪುಷ್ಟಗಿರಿ ನಿತ್ಯಹರಿದ್ವರ್ಣದಿಂದ ಕೂಡಿರುವ ಮಲೆಗಳು, ತಲಕಾವೇರಿ ಸುತ್ತಮುತ್ತಲ ಶ್ರೇಣಿಯ ದಟ್ಟ ಕಾಡುಗಳು, ದಕ್ಷಿಣ ಕೊಡಗಿನ ಬ್ರಹ್ಮಗಿರಿ, ನಾಗರಹೊಳೆ ಅಭಯಾರಣ್ಯಗಳಿಗೆ ಒಂದೊಮ್ಮೆ ಸೀಮಿತವಿದ್ದ ಕಾಡಾನೆಗಳು ಇಂದು ಜಿಲ್ಲೆಯಾದ್ಯಂತ ಅಲ್ಲಲ್ಲಿ ಹತ್ತಾರು ಸಂಖ್ಯೆಗಳಲ್ಲಿ ಹಿಂಡು ಹಿಂಡಾಗಿ ಸುತ್ತಾಡುತ್ತಿರುವ ದೃಶ್ಯಗಳು ಸಾಮಾನ್ಯ.

ಈ ನಡುವೆ ಕೊಡಗಿನ ದುಬಾರೆಯಲ್ಲಿರುವ ಸಾಕಾನೆಗಳ ಶಿಬಿರದಲ್ಲಿ, ಇಲಾಖೆಯ ಅಂದಾಜಿನಂತೆ ಪ್ರಸಕ್ತ 29 ಸಾಕಾನೆಗಳು ಇರುವದಾಗಿದೆ. ಇನ್ನೊಂದೆಡೆ ಈಚೆಗೆ ನಡೆಸಲಾಗಿರುವ ಸಮೀಕ್ಷೆಯ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಮುನ್ನೂರಕ್ಕೂ ಅಧಿಕ ಕಾಡಾನೆಗಳು ಆನೆ ಗಣತಿ ಸಂದರ್ಭ ಗೋಚರಿಸಿವೆ. ಅದರಂತೆ ಸಮೀಕ್ಷೆಯ ವರದಿ ಪ್ರಕಾರ ವೀರಾಜಪೇಟೆ ಅರಣ್ಯ ವಲಯ ಪ್ರದೇಶದಲ್ಲಿ 69 ಕಾಡಾನೆಗಳು ಕಂಡು ಬಂದಿವೆ. ಜಿಲ್ಲೆಯಲ್ಲಿ ಬಹುಶಃ ಅಧಿಕ ಸಂಖ್ಯೆಯಲ್ಲಿನ ಗಜಪಡೆ ಈ ವಲಯದಲ್ಲಿ ಕಾಣಿಸಿಕೊಂಡಿರುವದು ಖಾತರಿಯಾಗಿದೆ.

ಇನ್ನು ನಿರಂತರ ಮಾನವನೊಂದಿಗೆ ಸಂಘರ್ಷಕ್ಕೆ ಕಾರಣವಾಗಿರುವ ಮತ್ತು ಈಚೆಗೆ ಬೆಳ್ಳಂಬೆಳಗ್ಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬಲಿ ಪಡೆದಿರುವ ತಿತಿಮತಿ ಅರಣ್ಯ ವಲಯ ಪ್ರದೇಶದಲ್ಲಿ, ಕಾಡಾನೆಗಳ ಸಂಖ್ಯೆ 54 ರಷ್ಟು ಕಂಡು ಬಂದಿರುವದಾಗಿ ಗಣತಿಯಿಂದ ಮಾಹಿತಿ ದೊರೆತಿದೆ. ಹೀಗೆ ಗಣತಿ ಮುಂದುವರಿಸಿದ ಸಂದರ್ಭ ಪೊನ್ನಂಪೇಟೆ ಅರಣ್ಯ ವಲಯದಲ್ಲಿ ಸಂಬಂಧಪಟ್ಟವರು ಪತ್ತೆಹಚ್ಚಿರುವ ಕಾಡಾನೆಗಳ ಗಣತಿ ಸಂಖ್ಯೆ 16 ಆಗಿದ್ದು, ಮುಂಡ್ರೋಟು ಅರಣ್ಯ ವಲಯದಲ್ಲಿ ಎರಡು ಹಾಗೂ ಮಾಕುಟ್ಟ ವಲಯದಲ್ಲಿ ಕೇವಲ ಒಂದು ಕಾಡಾನೆ ಸಂಖ್ಯೆಗೆ ಸಿಕ್ಕಿದೆಯಂತೆ.

ಇನ್ನು ಮಡಿಕೇರಿ ಉಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳ ಗಣತಿ ಸಂದರ್ಭ ಒಟ್ಟಾರೆಯಾಗಿ 86 ಕಾಡಾನೆಗಳು ಗಣತಿಗೆ ಸಿಕ್ಕಿವೆ. ಇಲ್ಲಿ ವಲಯವಾರು ನಿಖರವಾಗಿ ಸಂಖ್ಯೆಗಳ ವಿವರ ಇನ್ನಷ್ಟೇ ಲಭಿಸಬೇಕಿದ್ದು, ಒಟ್ಟು ಸಂಖ್ಯೆ ಖಚಿತವಾಗಿ 86 ಎಂದು ದೃಢಪಟ್ಟಿದೆ. ಮಡಿಕೇರಿ ಅರಣ್ಯ ಉಪ ವಿಭಾಗಕ್ಕೆ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಭಾಗಮಂಡಲ ಹಾಗೂ ಸಂಪಾಜೆ ಅರಣ್ಯ ವಲಯ ಪ್ರದೇಶಗಳು ಒಳಗೊಂಡಿವೆ. ಅಲ್ಲದೆ ಅರಣ್ಯ ವನ್ಯಜೀವಿ ಪ್ರದೇಶಗಳಲ್ಲಿ ಕಾಡಾನೆಗಳ ಇರುವಿಕೆ ಕುರಿತು ಗಣತಿ ನಡೆಸಿದ ಸಂದರ್ಭ ಮಡಿಕೇರಿ ಉಪ ವಿಭಾಗ ವನ್ಯಧಾಮ

(ಮೊದಲ ಪುಟದಿಂದ) ಪ್ರದೇಶವಾದ ತಲಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಗೋಚರವಾಗಿರುವ ಕಾಡಾನೆಗಳ ಸಂಖ್ಯೆ 36 ಎಂದು ಮಾಹಿತಿ ಲಭಿಸಿದೆ.

ಇನ್ನು ವನ್ಯಧಾಮ ಮಾತ್ರವಲ್ಲದೆ ಮೀಸಲು ಅರಣ್ಯಗಳು ಸೇರಿದಂತೆ ಜಲಮೂಲದಿಂದ ಕೂಡಿದ ಕಾಡಿನಂಚಿನ ಪ್ರದೇಶಗಳಲ್ಲಿ ಸುಳಿದಾಡುತ್ತಿದ್ದ ಇಂತಹ ಗಜಪಡೆಯ ಸಂಖ್ಯೆ 39 ಕಂಡು ಬಂದಿವೆ. ವಿಶ್ವಸನೀಯ ಮೂಲಗಳ ಪ್ರಕಾರ ಇಡೀ ದೇಶವ್ಯಾಪಿ ಕಾಡಾನೆಗಳ ನಿಖರ ಸಂಖ್ಯೆಗಾಗಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಖಾಸಗಿ ಸೇವಾ ಟ್ರಸ್ಟ್ ಎ.ಎನ್.ಸಿ.ಎಫ್ ಈ ಕಾಡಾನೆ ಸಮೀಕ್ಷೆ ನಡೆಸುತ್ತಿದೆ. ಹೀಗಾಗಿ ಕೊಡಗು ಸೇರಿದಂತೆ ದೇಶದೆಲ್ಲೆಡೆ ಇರುವ ಕಾಡಾನೆಗಳ ಸಮಗ್ರ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ಖಾಸಗಿಯವರು ಸಲ್ಲಿಸಬೇಕಿದೆ.

ಆ ಬಳಿಕ ದೇಶದಲ್ಲಿ ಹಾಗೂ ರಾಜ್ಯದೆಲ್ಲೆಡೆ ಕಾಡಾನೆಗಳ ಸಂಖ್ಯೆ ಕುರಿತು ಅಧಿಕೃತ ಮಾಹಿತಿಯನ್ನು ಕೇಂದ್ರ ಸರಕಾರ ಪ್ರಕಟಿಸಲಿದೆ. ಬಲ್ಲಮೂಲಗಳ ಪ್ರಕಾರ ಕೆಲವು ವರ್ಷದ ಹಿಂದೆ ಕೊಡಗಿನಲ್ಲಿ ನಡೆಸಲಾದ ಕಾಡಾನೆಗಳ ಗಣತಿ ಸಂದರ್ಭ ಇನ್ನೂರಕ್ಕೂ ಅಧಿಕ ಸಂಖ್ಯೆಯ ಮಾಹಿತಿ ಹೊರಬಿದ್ದಿತ್ತು. ಪ್ರಸಕ್ತ ವರ್ಷದಲ್ಲಿ ಈ ಸಂಖ್ಯೆ ಒಟ್ಟಾರೆಯಾಗಿ 303ರಷ್ಟು ಲಭಿಸಿದೆ. ದುಬಾರೆಯಲ್ಲಿರುವ 29 ಸಾಕಾನೆಗಳು ಸೇರಿದಂತೆ ಕಾವೇರಿ ನಾಡಿನಲ್ಲಿ ಸರಿ ಸುಮಾರು 350ಕ್ಕೂ ಅಧಿಕ ಗಜಪಡೆಗಳಿದ್ದು, ಈ ಪುಟ್ಟ ಕೊಡಗಿನಲ್ಲಿ 300 ಸಂಖ್ಯೆ ದಾಟಿರುವ ಪರಿಣಾಮ ಕಾಲ ಕಾಲಕ್ಕೆ ನೀರು, ಆಹಾರದ ಕೊರತೆಯಿಂದ ಕಾಡಾನೆಗಳು ಧಾಳಿಯಿಡುತ್ತಾ, ನಾಡಿನಲ್ಲಿ ಕೃಷಿ ಫಸಲು ನಷ್ಟಗೊಳಿಸಿ ಮಾನವನೊಡನೆ ಸಂಘರ್ಷಕ್ಕಿಳಿದಿರುವದು ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. ಹೀಗಾಗಿ ಕಾವೇರಿ ನಾಡಿನಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಗಂಭೀರ ಚಿಂತನೆಯೊಂದಿಗೆ ಪರ್ಯಾಯ ಯೋಜನೆಯನ್ನು ರೂಪಿಸುವ ಅಗತ್ಯ ಕೂಡ ಅನಿವಾರ್ಯ. - ಶ್ರೀಸುತ