ಸುಂಟಿಕೊಪ್ಪ, ಜೂ. 30: ಐಗೂರು ಗ್ರಾಮದ ಹೃದಯ ಭಾಗದಲ್ಲಿರುವ ಬಸ್ ತಂಗುದಾಣ ಗ್ರಾಮ ಪಂಚಾಯಿತಿಯ ಅವಕೃಪೆಯಿಂದ ನಿರ್ವಹಣೆಯಿಲ್ಲದೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಬಸ್ ನಿಲ್ದಾಣ ಸುಸ್ಥಿತಿಗೆ ಕಾಯಕಲ್ಪ ಒದಗಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

1991ರಲ್ಲಿ ಐಗೂರು ಮಂಡಲ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಎಂ.ಎಲ್. ಅಪ್ಪಚ್ಚು ಅವರ ಆಡಳಿತ ಅವಧಿಯಲ್ಲಿ ಐಗೂರಿನಲ್ಲಿ ನಿರ್ಮಿಸಲಾದ ಬಸ್ ತಂಗುದಾಣ ಬೀಳುವ ಸ್ಥಿತಿಯಲ್ಲಿದೆ. ಐಗೂರು, ಕಾಜೂರು, ಯಡವಾರೆ, ಹಾರಂಗಿ, ಹೊರವಾಳೆ ಗ್ರಾಮ ನಿವಾಸಿಗಳು ಸೋಮವಾರಪೇಟೆ, ಮಡಿಕೇರಿ, ಕುಶಾಲನಗರ ಕಡೆಗೆ ತೆರಳುವಾಗ ಈ ಬಸ್ ತಂಗುದಾಣದಲ್ಲಿ ವಿಶ್ರಾಂತಿ ಪಡೆದು ಪ್ರಯಾಣ ಮುಂದುವರೆಸುತ್ತಿದ್ದರು. ವಾಹನ ಡಿಕ್ಕಿಯಾಗಿ ಭಾಗಶಃ ಬಸ್ ತಂಗುದಾಣದ ಗೋಡೆ ಕುಸಿದಿದೆ. ಗ್ರಾಮ ಪಂಚಾಯಿತಿಯವರು ಈ ಬಸ್ ತಂಗುದಾಣಕ್ಕೆ ಪುನಶ್ಚೇತನ ನೀಡಲು ಮುಂದಾಗದಿರುವದು ವಿಷಾದನೀಯ.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನೆಗೆ ತೆರಳುವ ಸಂಪಿಗೆಕೊಲ್ಲಿ ಐಗೂರು 2ನೇ ವಿಭಾಗದ ತಂಗುದಾಣ ತೀರಾ ದುಸ್ಥಿತಿಯಲ್ಲಿದ್ದನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಈ ತಂಗುದಾಣದ ವಿಭಾಗದಲ್ಲಿ ಅಷ್ಟೊಂದು ಜನ ಸಂಖ್ಯೆಯೂ ಇಲ್ಲ. ಆದರೆ ಪ್ರಮುಖ ಜನಸಂದಣಿ ಸೇರುವ ತಂಗುದಾಣದ ಬಗ್ಗೆ ಗ್ರಾಮ ಪಂಚಾಯಿತಿಯವರಿಗೆ ಯಾಕೆ ನಿರ್ಲಕ್ಷ್ಯ ಎಂದು ಗ್ರಾಮಸ್ಥರಾದ ಅಪ್ಪು, ಮಣಿ, ಸೋಮ ಹಾಗೂ ಸಂತೋಷ್ ಆಗ್ರಹಿಸಿದ್ದಾರೆ.