ಸೋಮವಾರಪೇಟೆ,ಜೂ.30: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಗುಂದ ಗ್ರಾಮದಲ್ಲಿ ಜುಲೈ 2ರಂದು ನಿಶ್ಚಯಗೊಂಡಿದ್ದ ಬಾಲ್ಯವಿವಾಹಕ್ಕೆ ಅಧಿಕಾರಿಗಳು ತಡೆಯೊಡ್ಡಿ, ಅಪ್ರಾಪ್ತೆಯನ್ನು ರಕ್ಷಿಸಿ ಮಡಿಕೇರಿಯ ಬಾಲಕಿಯರ ಬಾಲಮಂದಿರಕ್ಕೆ ಕರೆದೊಯ್ದಿದ್ದಾರೆ.ವಳಗುಂದ ಗ್ರಾಮದ ಅಪ್ರಾಪ್ತೆ (17 ವರ್ಷ)ಯನ್ನು ಎಳನೀರುಗುಂಡಿಯ ಯುವಕನೊಂದಿಗೆ ವಿವಾಹ ಮಾಡಿಕೊಡಲು ಸಕಲ ಸಿದ್ಧತೆ ನಡೆಸಲಾಗಿತ್ತು. ಈ ಬಗ್ಗೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ನೆಂಟರಿಷ್ಟರು ಹಾಗೂ ಗ್ರಾಮಸ್ಥರಿಗೆ ಹಂಚಲಾಗಿತ್ತು. ವಿವಾಹವಾಗಬೇಕಿದ್ದ ವಧುವಿಗೆ ಇನ್ನೂ 18 ವರ್ಷ ತುಂಬದ ಹಿನ್ನಲೆ ಗ್ರಾಮದವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರು. ಇಂದು ಸ್ಥಳಕ್ಕೆ ತೆರಳಿದ ಮಡಿಕೇರಿ ಹಾಗೂ ಸೋಮವಾರಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಧುವಿನ ಪೋಷಕರನ್ನು ಭೇಟಿ ಮಾಡಿ,

(ಮೊದಲ ಪುಟದಿಂದ) ಬಾಲ್ಯ ವಿವಾಹ ಅಪರಾಧದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನಂತರ ಅಪ್ರಾಪ್ತೆಯನ್ನು ಮಡಿಕೇರಿ ಬಾಲಕಿಯರ ಬಾಲಮಂದಿರಕ್ಕೆ ಕರೆದೊಯ್ದಿದ್ದಾರೆ.

ಇದೇ ಮನೆಯಲ್ಲಿ ಯುವತಿಯ ಸಹೋದರ ಕೂಡ ಸಕಲೇಶಪುರ ಸಮೀಪದ ಕೂಡುರಸ್ತೆಯ ಅಪ್ರಾಪ್ತೆ ಬಾಲಕಿಯನ್ನು ವಿವಾಹವಾಗಲೆಂದು ಕರೆತಂದಿದ್ದು, ಆಕೆಯನ್ನೂ ಸಹ ರಕ್ಷಿಸಿ ಬಾಲಮಂದಿರಕ್ಕೆ ಕರೆದುಕೊಂಡು ಹೋಗಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳೊಂದಿಗೆ ಸೋಮವಾರಪೇಟೆ ಪೊಲೀಸ್ ಠಾಣೆಯ ಎಎಸ್‍ಐ ಶಿವಣ್ಣ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು.