ಶ್ರೀಮಂಗಲ, ಜೂ. 30: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುಮಟೂರು ಗ್ರಾಮದ ಸುತ್ತಮುತ್ತ ಕಾಡಾನೆ ಹಿಂಡುಗಳು ಬೀಡು ಬಿಟ್ಟಿದ್ದು, ಇದುವರೆಗೆ ತೋಟ, ಗದ್ದೆಗಳಲ್ಲಿ ಬೆಳೆನಷ್ಟ ಪಡಿಸುತ್ತಿದ್ದ ಕಾಡಾನೆ ಹಿಂಡುಗಳು ರೈತರ ಮನೆಯ ಅಂಗಳಕ್ಕೆ ಲಗ್ಗೆ ಇಡುತ್ತಿವೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಬೋಗಸ್ ಕಾರ್ಯಾಚರಣೆಗಳನ್ನು ಮಾಡದೆ ಪ್ರಾಮಾಣಿಕವಾಗಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಈ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.

ಎರಡು ವಾರದ ಹಿಂದೆಯಷ್ಟೆ ಅರಣ್ಯ ಇಲಾಖೆಯಿಂದ ಗ್ರಾಮದಿಂದ ಅರಣ್ಯಕ್ಕೆ ಕಾಡಾನೆ ಅಟ್ಟುವ ಕಾರ್ಯಾಚರಣೆ ನಡೆದಿತ್ತು. ಕಾರ್ಯಾಚರಣೆ ವೈಫಲ್ಯವಾಗಿರುವದಕ್ಕೆ ಸಾಕ್ಷಿ ಎಂಬಂತೆ ಕಾರ್ಯಾಚರಣೆಯ ಬೆನ್ನ ಹಿಂದೆಯೇ ಕಾಡಾನೆಗಳು ಗ್ರಾಮದಲ್ಲಿ ಬೀಡುಬಿಟ್ಟಿವೆ.

ಕುಮಟೂರು ಗ್ರಾಮದ ಪೊಯಿಲೇಂಗಡ ಗೋಪಾಲ್ ಅವರ ಮನೆಯ ಅಂಗಳಕ್ಕೆ ಕಾಡಾನೆ ಹಿಂಡುಗಳು ಲಗ್ಗೆ ಇಟ್ಟಿದ್ದು, ಮನೆಯ ಎದುರಿನಲ್ಲೇ ಇರುವ ಮಾವಿನ ಮರದಲ್ಲಿ ಹಣ್ಣುಗಳನ್ನು ಕಿತ್ತು ತಿಂದಿವೆ. ಇದಲ್ಲದೆ ಮನೆಯ ಸುತ್ತ ಸಂಚರಿಸಿದ್ದು, ಮನೆಯ ಸುತ್ತ ಇಟ್ಟಿರುವ ಹೂವಿನ ಕುಂಡಗಳನ್ನು ತುಳಿದು ಹಾನಿ ಮಾಡಿವೆ. ಗೋಪಾಲ್ ಅವರ ಮನೆಯ ಸುತ್ತ ಇರುವ ತೋಟದಲ್ಲಿ ಕಾಫಿ, ಅಡಿಕೆ, ತೆಂಗು, ಬಾಳೆ ಇತ್ಯಾದಿ ಬೆಳೆಗಳನ್ನು ನಷ್ಟ ಪಡಿಸಿವೆ. ಸಮೀಪದ ಕೋಟ್ರಂಗಡ ಹರೀಶ್ ಅವರ ತೋಟದಲ್ಲೂ ಬೀಡು ಬಿಟ್ಟಿರುವ ಕಾಡಾನೆ ಹಿಂಡುಗಳು ಬೆಳೆ ನಷ್ಟಗೊಳಿಸಿವೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ರೈತ ಸಂಘದ ಪದಾಧಿಕಾರಿ ಮಚ್ಚಮಾಡ ರಂಜಿ ಅವರು, ಗ್ರಾಮದಲ್ಲಿ ಹಲವು ದಿನದಿಂದ ಬೀಡು ಬಿಟ್ಟಿರುವ ಕಾಡಾನೆಗಳಿಂದ ಈ ಭಾಗದ ತೋಟಗಳಲ್ಲಿ ಕಾರ್ಮಿಕರು ಕೆಲಸ ಮಾಡಲು, ಜನಸಂಚಾರ ಮತ್ತು ವಿದ್ಯಾರ್ಥಿಗಳು ಶಾಲೆಗೆ ತೆರಳಲು ಆತಂಕ ಪಡುವಂತಾಗಿದೆ. ಎರಡು ವಾರದ ಹಿಂದೆಯಷ್ಟೆ ಶ್ರೀಮಂಗಲ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಅರಣ್ಯಕಟ್ಟುವ ಕಾರ್ಯಾಚರಣೆ ಅರಣ್ಯ ಇಲಾಖೆಯಿಂದ ಕೈಗೊಂಡರೂ ಕಾಡಾನೆಗಳು ಗ್ರಾಮದಲ್ಲಿಯೆ ಉಳಿದಿವೆ. ಕಾಡಾನೆ ಅರಣ್ಯಕಟ್ಟುವ ಕಾರ್ಯಾಚರಣೆ ಕೇವಲ ಬೋಗಸ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಪ್ರಾಮಾಣಿಕ ಪ್ರಯತ್ನ ಅರಣ್ಯ ಇಲಾಖೆಯಿಂದ ಆಗಬೇಕು. ಇಲಾಖೆಯ ಮೇಲಾಧಿಕಾರಿಗಳು ಖುದ್ದು ಪಾಲ್ಗೊಳ್ಳಬೇಕು. ಹಗಲು ರಾತ್ರಿ ಎನ್ನದೆ ಕಾಡಾನೆಗಳು ಗ್ರಾಮದಲ್ಲಿ ಸಂಚರಿಸುತ್ತಿರುವದರಿಂದ ಮಾನವ ಜೀವ ಹಾನಿ ಉಂಟಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ವಿದ್ಯುತ್ ತಂತಿಗಳು ಸಹ ಹಲವೆಡೆ ಜೋತು ಬಿದ್ದಿದ್ದು, ಕಾಡಾನೆಗಳಿಗೂ ಸಹ ವಿದ್ಯುತ್ ತಂತಿ ಸ್ಪರ್ಶವಾಗಿ ಜೀವಹಾನಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು.