ಗೋಣಿಕೊಪ್ಪಲು,ಜೂ.30: ಕಾನೂರು ಲಕ್ಷ್ಮಣ ತೀರ್ಥ ನದಿ ತಟದಲ್ಲಿ ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಾಣ ಗೊಂಡಿರುವ ಅಮ್ಮಕೊಡವ ಕುಟುಂಬ ಸಂಪರ್ಕ ಸೇತುವೆ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತವಾಗಿದೆಯೇ ವಿನಃ ಕಳಪೆ ಕಾಮಗಾರಿಯಾಗಿಲ್ಲ ಎಂದು ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು ಪ್ರತಿಕ್ರಿಯೆ ನೀಡಿದ್ದಾರೆ.

‘ಶಕ್ತಿ’ಯಲ್ಲಿ ಉದ್ದೇಶಿತ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿರುವದಾಗಿ ಗಮನ ಸೆಳೆದ ವರದಿಗೆ ಈಗಾಗಲೇ ರೂ.10 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನಷ್ಟು ಅನುದಾನ ಅಗತ್ಯವಿದೆ. ಈ ಬಗ್ಗೆ ಕೂಡಲೇ ಅಮ್ಮಕೊಡವ ಕುಟುಂಬಸ್ಥರಿಗೆ ಓಡಾಟಕ್ಕೆ ಅನುಕೂಲವಾಗಲು ಸೇತುವೆ ಇಬ್ಬದಿ ಕಚ್ಚಾ ರಸ್ತೆ ಸಿದ್ಧಪಡಿಸಲಾಗುವದು. ಕೊಡಗು ಉಸ್ತುವಾರಿ ಸಚಿವ ಸೀತಾರಾಮ್ ಅವರಿಗೆ ಮನವರಿಕೆ ಮಾಡಿ ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಿ ಇನ್ನೂ ರೂ.5 ಲಕ್ಷ ಅನುದಾನಕ್ಕೆ ಮನವಿ ಮಾಡಲಾಗುವದು ಎಂದು ತಿಳಿಸಿದ್ದಾರೆ.

ಇದೇ ಸಂದರ್ಭ ಮಾತನಾಡಿದ ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪೂಣಚ್ಚ ಹಾಗೂ ಸೇತುವೆ ಉಸ್ತುವಾರಿ ವಹಿಸಿರುವ ಅಭಿಯಂತರ ಓಬಯ್ಯ ಸದರಿ ಗುತ್ತಿಗೆದಾರರು ರೂ.10 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸಿದ್ದು, ಕಳಪೆ ಕಾಮಗಾರಿಯಾಗಿಲ್ಲ. ಈವರೆಗೆ ಗುತ್ತಿಗೆದಾರರಾಗಿ ರೂ. 5.75 ಲಕ್ಷ ಬಿಲ್ ಪಾವತಿ ಮಾಡಿದ್ದು, ಉಳಿಕೆ ಮೊತ್ತ ಇನ್ನೂ ಪಾವತಿಸಿರುವದಿಲ್ಲ. ಶಾಸಕ ಕೆ.ಜಿ.ಬೋಪಯ್ಯ ಅವರಲ್ಲಿಯೂ ಸೇತುವೆ ಕಾಮಗಾರಿಗೆ ಅಂದಾಜು ರೂ.5 ಲಕ್ಷ ಹೆಚ್ಚುವರಿ ಅನುದಾನದ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಲಾಗಿದ್ದು, ಮಲೆನಾಡು ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ಅನುದಾನ ಕಲ್ಪಿಸಲು ಸಹಕರಿಸುವದಾಗಿ ತಿಳಿಸಿದ್ದಾರೆ ಎಂದು ಪೂಣಚ್ಚ ಮಾಹಿತಿ ನೀಡಿದ್ದಾರೆ.