ಸೋಮವಾರಪೇಟೆ, ಜೂ. 30: ಕಾಲಿಗೆ ಪೆಟ್ಟಾಗಿರುವ ಕಾಡಾನೆ ಯೊಂದು ಕುಂಟುತ್ತಾ ಸಾಗಿ ತನ್ನ ಆಹಾರವನ್ನು ಅರಸುತ್ತಿರುವ ಸನ್ನಿವೇಶ ಸೋಮವಾರಪೇಟೆ-ಮಡಿಕೇರಿ ಮುಖ್ಯರಸ್ತೆಯ ಕಾಜೂರು ಬಳಿ ದಿನಂಪ್ರತಿ ಕಾಣಸಿಗುತ್ತಿದೆ.ಕಾಜೂರು ಅರಣ್ಯದಿಂದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟಕ್ಕೆ ಕುಂಟುತ್ತಾ ಸಾಗುವ ಗಜರಾಜ ಅಲ್ಲಿ ಆಹಾರ ಲಭಿಸಿದ ನಂತರ ಸಂಜೆ ವೇಳೆಗೆ ಮತ್ತೆ ಅರಣ್ಯಕ್ಕೆ ತೆರಳುತ್ತಿದೆ. ಮುಖ್ಯರಸ್ತೆಯ ಕೋವರ್‍ಕೊಲ್ಲಿ-ಐಗೂರು ಮಧ್ಯೆ ಎದುರಾಗುವ ಗುಳಿಗಪ್ಪ ದೇವಾಲಯದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಹಾದು ಹೋಗುವ ಕಾಡಾನೆಗಳು, ಅರಣ್ಯ ಮತ್ತು ಕಾಫಿ ತೋಟದ ನಡುವೆ ‘ರಹದಾರಿ’ಯನ್ನು ನಿರ್ಮಿಸಿಕೊಂಡಿವೆ.

ಈ ಹಿಂದೆ 18 ಆನೆಗಳು ಐಗೂರು, ಕಾಜೂರು, ಯಡವಾರೆ, ಕಿರಗಂದೂರು, ಕೋವರ್‍ಕೊಲ್ಲಿ, ಹೊಸತೋಟ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದವು. ಈ ಭಾಗದ ಹಲವು ಕೃಷಿಕರಿಗೆ ಸೇರಿದ ಕೃಷಿ ಫಸಲನ್ನು ನಷ್ಟಪಡಿಸಿ ಜನಸಾಮಾನ್ಯರಿಗೂ ಜೀವಭಯ ತಂದೊಡ್ಡುತ್ತಿದ್ದವು. ಕಾಜೂರು ಅರಣ್ಯದಿಂದ ದಿನಂಪ್ರತಿ ಹೊರಬಂದು ಕಾಫಿತೋಟದೊಳಗೆ ಬೀಡುಬಿಟ್ಟು ಕಾರ್ಮಿಕರ ಕೂಲಿಗೂ ಕುತ್ತು ತರುತ್ತಿದ್ದವು.

ಇದೀಗ ಐಗೂರಿನಲ್ಲಿ ಹರಿಯುವ ಚೋರನ ಕೆರೆ ಮಳೆಗೆ ತುಂಬಿದ್ದು, ಮರಿಯಾನೆಗಳನ್ನು ಆಚೆ ಬದಿಗೆ ದಾಟಿಸಲು

(ಮೊದಲ ಪುಟದಿಂದ) ಅಸಾಧ್ಯವಾಗಿರುವ ಹಿನ್ನಲೆ ಬಹುತೇಕ ಆನೆಗಳು ಕಣ್ಮರೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗುಂಪಿನಿಂದ ಬೇರ್ಪಟ್ಟಿರುವ ಒಂಟಿ ಆನೆಯೊಂದು ಮಾತ್ರ ಆಹಾರಕ್ಕಾಗಿ ತೋಟಕ್ಕೆ ಆಗಮಿಸುತ್ತಿದೆ ಎಂದು ಟಾಟಾ ಕಾಫಿ ತೋಟದ ಕಾರ್ಮಿಕರು ಮಾಹಿತಿ ನೀಡಿದ್ದಾರೆ.

ಒಂಟಿಯಾಗಿರುವ ಆನೆಯ ಮುಂಭಾಗದ ಎಡ ಕಾಲಿಗೆ ಪೆಟ್ಟಾಗಿದ್ದು, ಬೇಲಿಯ ತಂತಿ ತಾಗಿರಬಹುದು ಅಥವಾ ಯಾರಾದರೂ ಕಾಲಿಗೆ ಗುಂಡು ಹಾರಿಸಿರಬಹುದು ಎಂದು ಸ್ಥಳೀಯರು ಸಂಶಯಿಸಿದ್ದಾರೆ. ಪಾದದ ಭಾಗಕ್ಕೆ ಗಾಯವಾಗಿರುವ ಕಾಡಾನೆ ಬಹಳ ತ್ರಾಸಪಟ್ಟು ನಡೆದಾಡುತ್ತಿದೆ.

ಕಾಜೂರು ಅರಣ್ಯಕ್ಕೆ ಒತ್ತಿಕೊಂಡಂತೆ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯೂ ಹಾದುಹೋಗಿದ್ದು, ಈ ಭಾಗದಲ್ಲೇ ಜನವಸತಿಯ ಪ್ರದೇಶವೂ ಇದೆ. ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ಅರಣ್ಯ ಇಲಾಖೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆನೆ ಕಂದಕವನ್ನೂ ತೆಗೆಯಲಾಗಿದ್ದು, ಅವೈಜ್ಞಾನಿಕ ಕಾಮಗಾರಿ ನಡೆದಿರುವ ಪರಿಣಾಮ ಆನೆಗಳು ಎಂದಿನಂತೆ ಅರಣ್ಯದಿಂದ ತೋಟಕ್ಕೆ ಲಗ್ಗೆಯಿಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸದ್ಯ ಒಂಟಿ ಆನೆಯೊಂದು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆಗೆ ಕಂಡುಬರುತ್ತಿದ್ದು, ಈ ಸಮಯದಲ್ಲಿ ಸಾಗುವ ವಾಹನ ಸವಾರರು ಹಾಗೂ ಸಾರ್ವಜನಿಕರು ಜಾಗ್ರತೆ ವಹಿಸಬೇಕಿದೆ. ಇದರೊಂದಿಗೆ ಗಾಯಗೊಂಡಿರುವ ಕಾಡಾನೆಯನ್ನು ಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಿ ಅರಣ್ಯಕ್ಕೆ ಅಟ್ಟಬೇಕಿದೆ. ತಪ್ಪಿದಲ್ಲಿ ಮಳೆಗಾಲವಾಗಿರುವದರಿಂದ ಗಾಯ ಉಲ್ಬಣಗೊಂಡು ಗಜರಾಜ ನೆಲಕ್ಕುರುಳುವದು ನಿಶ್ಚಿತವಾಗಿದೆ!

- ವಿಜಯ್ ಹಾನಗಲ್