ಕುಶಾಲನಗರ, ಜು. 1: ಕಾಡಾನೆಗಳ ಧಾಳಿಯಿಂದ ಸಂತ್ರಸ್ಥರಾಗುವ ಕುಟುಂಬಗಳಿಗೆ ಶಾಶ್ವತ ಅನುಕೂಲ ಕಲ್ಪಿಸಲು ಅಧಿಕಾರಿಗಳು ಹಾಗೂ ಅಧಿಕಾರೇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಫೌಂಡೇಶನ್ ಸ್ಥಾಪನೆ ಅಗತ್ಯ ಎಂದು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕುಶಾಲನಗರದ ಸುದ್ದಿ ಸೆಂಟರ್ ಸಂಯುಕ್ತಾಶ್ರಯದಲ್ಲಿ ದುಬಾರೆಯಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯಲ್ಲಿ ಆನೆ ಮಾನವ ಸಂಘರ್ಷ ಎಂಬ ವಿಷಯದಡಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆನೆ ಧಾಳಿಯಿಂದ ಮೃತಪಟ್ಟವರಿಗೆ ಇಲಾಖೆಯಿಂದ ರೂ. 5 ಲಕ್ಷ ಪರಿಹಾರ ದೊರಕುತ್ತಿದೆ ಹೊರತು ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅಂತಹ ಕುಟುಂಬಗಳಿಗೆ ಸಹಾಯಹಸ್ತ ಚಾಚಲು ಫೌಂಡೇಶನ್ ಮೂಲಕ ಸಾಧ್ಯ ಎಂದ ಮನೋಜ್‍ಕುಮಾರ್, ಇಂತಹ ಫೌಂಡೇಶನ್‍ಗಳಿಗೆ ಜಿಲ್ಲೆಯ ದುಬಾರೆ, ನಿಸರ್ಗಧಾಮ ಮುಂತಾದ ಪ್ರವಾಸಿ ತಾಣಗಳಿಂದ ದೊರಕುವ ಆದಾಯವನ್ನು ಕ್ರೋಢೀಕರಿಸಿ ಫೌಂಡೇಶನ್ ಮೂಲಕ ಸಂತ್ರಸ್ಥರಿಗೆ ಬಳಸಬಹುದು. ಇರ್ಪು ಮುಂತಾದ ಪ್ರವಾಸಿ ಕೇಂದ್ರಗಳಲ್ಲಿ ಇಲಾಖೆ ಮೂಲಕ ಬರುವ ಆದಾಯ ಸೇರಿದಂತೆ ಅಂದಾಜು ರೂ. 4 ಕೋಟಿ ವಾರ್ಷಿಕ ಆದಾಯ ಸಂತ್ರಸ್ಥರಿಗೆ

(ಮೊದಲ ಪುಟದಿಂದ) ಅನುಕೂಲ ಕಲ್ಪಿಸಲು ಸಹಕಾರಿಯಾಗುತ್ತದೆ ಎಂದರು. ಪ್ರಸಕ್ತ ಕಾಡಾನೆ ಹಾವಳಿಯಿಂದ ಸಂತ್ರಸ್ಥರಾಗುವ ಜನರಿಗೆ ಪರಿಹಾರ ನೀಡಲು ಸರಕಾರದ ಬಳಿ ಹಣದ ಕೊರತೆಯಿಲ್ಲ ಎಂದ ಅವರು, ಕೊಡಗು ವೃತ್ತದಲ್ಲಿ ಆನೆ ಮಾನವ ಸಂಘರ್ಷದಲ್ಲಿ ಕೇವಲ 50 ರಿಂದ 100 ಆನೆಗಳು ಮಾತ್ರ ತೊಡಗಿವೆ ಎಂದು ಅಂಕಿಅಂಶ ನೀಡಿದರು. ಪ್ರಕೃತಿ ಬದಲಾದಂತೆ ಕಾಡಾನೆಗಳ ವರ್ತನೆಗಳು ಕೂಡ ಬದಲಾಗುತ್ತಿವೆ. ಈ ಸಂದರ್ಭ ಹೊಂದಾಣಿಕೆಯಾಗದೆ ಸಂಘರ್ಷಗಳು ಉಂಟಾಗುತ್ತಿವೆ ಎಂದರು.

ಆನೆಗಳು ಅರಣ್ಯದಿಂದ ಹೊರಬಾರದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಅರಣ್ಯದಂಚಿನಲ್ಲಿ ಹಳೆಯ ಕೆರೆಗಳ ಅಭಿವೃದ್ಧಿ ಕಾಮಗಾರಿ, ಗಿಡ ನೆಡುವ ಕಾರ್ಯಕ್ರಮ, ಬೀಜ ಬಿತ್ತನೆ ಮುಂತಾದ ಯೋಜನೆಗಳನ್ನು ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ 20 ರಿಂದ 25 ಆನೆಗಳು ನಿರಂತರವಾಗಿ ಹಾನಿ ಮಾಡುತ್ತಿದ್ದು ಈ ಸಂಬಂಧ ವೃತ್ತದ ವ್ಯಾಪ್ತಿಯಲ್ಲಿ 200 ಜನ ಸಿಬ್ಬಂದಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ಒದಗಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬೇಕು ಎಂದರಲ್ಲದೆ ಜನಪರ ವರದಿಗಳನ್ನು ಬಿಂಬಿಸಲು ಬದ್ಧರಾಗಬೇಕಿದೆ ಎಂದರು.

ಉದ್ಯಮಿ ಕೆ.ಎಸ್.ರತೀಶ್, ರ್ಯಾಫ್ಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸಿ.ಎಲ್.ವಿಶ್ವ, ಪತ್ರಕರ್ತರ ಸಂಘದ ಖಜಾಂಚಿ ಸವಿತಾ ರೈ ಉಪಸ್ಥಿತರಿದ್ದು ಮಾತನಾಡಿದರು.

ಸುದ್ದಿ ಸೆಂಟರ್ ಸಂಚಾಲಕ ಎಂ.ಎನ್.ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯ ಕೆ.ಎಸ್.ಮೂರ್ತಿ ಪುತ್ರ ಕೆ.ಎಂ.ಹರ್ಷಿತ್ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ದುಬಾರೆ ಕಾವೇರಿ ನದಿ ತಟದಲ್ಲಿ ಗಿಡಗಳನ್ನು ನೆಡಲಾಯಿತು.