ಶ್ರೀಮಂಗಲ, ಜು. 1: ಕೊಡಗು ಜಿಲ್ಲೆಯಾದ್ಯಂತ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಅರಣ್ಯ ಸರಹದ್ದುವಿನಲ್ಲಿ ರೈಲ್ವೆ ಹಳಿ ನಿರ್ಮಾಣ, ಆನೆ ಕಂದಕ ನಿರ್ವಹಣೆಗೆ ಎರಡು ಜೆಸಿಬಿ ನಿಯೋಜನೆ, ಅಲ್ಲದೆ ದುಬಾರೆ, ಇರ್ಪು ಮತ್ತು ಕಾವೇರಿ ನಿಸರ್ಗಧಾಮ ದಲ್ಲಿ ಪ್ರವಾಸಿಗರಿಂದ ಅರಣ್ಯ ಇಲಾಖೆಗೆ ಬರುವ ಆದಾಯವನ್ನು ವನ್ಯಪ್ರಾಣಿ ಗಳಿಂದ ಸಂತ್ರಸ್ಥ ಗಾಯಾಳುಗಳಿಗೆ ಪರಿಹಾರವಾಗಿ ನೀಡಲು ಮತ್ತು ವನ್ಯಪ್ರಾಣಿಗಳ ಹಾವಳಿ ತಡೆಗಟ್ಟುವ ಯೋಜನೆಗೆ ಬಳಸಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಭಾರತೀಯ ಕಿಸಾನ್ ಸಂಘದಿಂದ ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದ ಬೆನ್ನಲ್ಲೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಕಿಸಾನ್ ಸಂಘದ ಪದಾಧಿಕಾರಿ ಗಳೊಂದಿಗೆ ಮಡಿಕೇರಿ ಅರಣ್ಯ ಭವನದಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಮಾತನಾಡಿ, ಜಿಲ್ಲೆಯಾದ್ಯಂತ ಕಾಡಾನೆ ಹಾವಳಿಯಿಂದ ರೈತರು, ಕಾರ್ಮಿಕರು ಸಾವು ನೋವು ಅನುಭವಿಸುತ್ತಿದ್ದು, ಇನ್ನೊಂದು ಕಡೆ ರೈತರು-ಬೆಳೆಗಾರರು ದಿನನಿತ್ಯ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಇದಲ್ಲದೆ, ಗ್ರಾಮಕ್ಕೆ ನುಸುಳುವ ಕಾಡಾನೆಗಳು ಹಾಗೂ ಇತರ ವನ್ಯಜೀವಿಗಳು ಸಹ ಅಸ್ವಾಭಾವಿಕವಾಗಿ ಮರಣಹೊಂದುತ್ತಿವೆ, ಇವೆಲ್ಲದಕ್ಕೂ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಅರಣ್ಯ ಇಲಾಖೆಯಿಂದ ತೋಡಲಾಗಿರುವ ಆನೆ ಕಂದಕ ಬಹಳಷ್ಟು ಮುಚ್ಚಿಹೋಗಿದೆ. ಅದಕ್ಕಾಗಿ ಅರಣ್ಯ ಇಲಾಖೆ ಎರಡು ಜೆಸಿಬಿಗಳನ್ನು ಖರೀದಿಸಿ ಉತ್ತರ ಕೊಡಗಿಗೆ ಹಾಗೂ ದಕ್ಷಿಣ ಕೊಡಗಿಗೆ ತಲಾ ಒಂದೊಂದು ಜೆಸಿಬಿ ವರ್ಷದ ಎಲ್ಲಾ ಸಮಯದಲ್ಲಿ ಶಾಶ್ವತವಾಗಿ ನಿಯೋಜಿಸುವಂತೆ ಸಲಹೆ ನೀಡಿದಾಗ ಸಿಸಿಎಫ್ ಮನೋಜ್ ಕುಮಾರ್ ಇದರ ಶೀಘ್ರ ಅನುಷ್ಠಾನಕ್ಕೆ ಒಪ್ಪಿಗೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಮಾತನಾಡಿ, ಆನೆ ಹಾವಳಿ ತಡೆಗೆ ರೈಲ್ವೆ ಹಳಿ ಮೂಲಕ ತಯಾರಿಸುವ ಬೇಲಿ ಪರಿಣಾಮಕಾರಿಯಾಗಿದೆ ಇದನ್ನೇ ಅಗತ್ಯವಿರುವಲ್ಲಿಗೆ ನಿರ್ಮಿಸುವಂತೆ ಸಲಹೆ ನೀಡಿದರು. ಅರಣ್ಯಾಧಿಕಾರಿ ಉತ್ತರಿಸಿ ರೈಲ್ವೆ ಹಳಿ ಮೂಲಕ ಕಾಡಾನೆ ತಡೆ ಬೇಲಿ ನಿರ್ಮಿಸಲು ಅರಣ್ಯ ಇಲಾಖೆ ಬಳಿ ಇನ್ನೂರು ಕೋಟಿ ಅನುದಾನವಿದೆ. ಆದರೆ, ರೈಲ್ವೆ ಹಳಿ ಖರೀದಿಗೆ ಶೇ. 60 ರಷ್ಟು ಬಳಕೆಯಾಗುತ್ತದೆ. ಉಳಿದ ಶೇ. 40 ಮಾತ್ರ ಕಾಮಗಾರಿಗೆ ಬಳಸಲು ಸಾಧ್ಯವಿದೆ ಆದರಿಂದ ರೈಲ್ವೆ ಹಳಿ ಕಡಿಮೆ ದರಕ್ಕೆ ದೊರೆತರೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ವೆ ಕಾಮಗಾರಿ ಮಾಡಿದ ಇಂಜಿನಿಯರ್‍ಗಳ ಸಲಹೆ ಪಡೆದು ತಲಾ 6 ಸಾವಿರ ಕೆ.ಜಿ. ತೂಕವಿರುವ ಕಂಬಿಗಳ ಬೇಲಿ ತಯಾರಿಸುವ ಯೋಜನೆ ರೂಪಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಜನರ ಸೂಕ್ತ ಸಲಹೆ ಪಡೆದು ಅಗತ್ಯ ಸ್ಥಳದಲ್ಲಿ, ಸೂಕ್ತ ರೀತಿಯಲ್ಲಿ ಅರಣ್ಯದೊಳಗೆ ಕೆರೆ ನಿರ್ಮಿಸಲಾಗುವದು ಎಂದು ಮಾಹಿತಿ ನೀಡಿದರು.

ಕಾಫಿ ರಾಷ್ಟ್ರೀಯ ಪಾನಿಯ ಸಂಚಾಲಕ ಮಾಚಿಮಾಡ ಎಂ. ರವೀಂದ್ರ ಮಾತನಾಡಿ, ಕಾಡಾನೆ ತಡೆ ಯೋಜನೆಗೆ ರೈಲ್ವೆ ಹಳಿ ರಿಯಾಯಿತಿ ದರದಲ್ಲಿ ದೊರೆಯುವಂತೆ ಕೇಂದ್ರ ಉಕ್ಕು ಮತ್ತು ಗಣಿ ಸಚಿವ, ಉಕ್ಕು ಉತ್ಪಾದನೆ ಸಂಸ್ಥೆ ಜಿûಂದಾಲ್ ಅಧಿಕಾರಿಗಳೊಂದಿಗೆ ಕೇಂದ್ರದ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳ ಸಹಿತ ಕಿಸಾನ್ ಸಂಘದಿಂದ ನಿಯೋಗ ತೆರಳಲು ಅಗತ್ಯ ಸಹಕಾರ ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.

ನಾಪೋಕ್ಲು ನಿವಾಸಿಗಳಾದ ಕೊಡಗು ಸತ್ಯಾನ್ವೇಷಣೆ ಸಮಿತಿಯ ಕೆಟೋಳಿರ ಸನ್ನಿ ಸೋಮಣ್ಣ ಹಾಗೂ ಪಾಂಡಂಡ ನರೇಶ್ ಮಾತನಾಡಿ, ಕೇರಳ ರಾಜ್ಯದ ವಯಸ್ಸಾದ ಮತ್ತು ಉಪಯೋಗಕ್ಕೆ ಬಾರದ ಸಾಕಾನೆಗಳನ್ನು ಜಿಲ್ಲೆಯ ಅರಣ್ಯದೊಳಗೆ ಬಿಡಲಾಗಿದೆ, ಇವುಗಳು ವ್ಯಾಪಕ ಉಪಟಳ ನೀಡುತ್ತಿದೆ ಎಂದು ಪ್ರಸ್ತಾಪಿಸಿದಾಗ ಇದಕ್ಕೆ ಸಿಸಿಎಫ್ ಅವರು ಅಂತಹ ಪ್ರಕರಣದ ಬಗ್ಗೆ ಅಧಿಕೃತ ಮಾಹಿತಿ ಸಂಗ್ರಹಿಸಿಲು ಮತ್ತು ಕಾಡಾನೆಗಳನ್ನು ಪತ್ತೆ ಹಚ್ಚಿ ಅವುಗಳ ಚಲನ-ವಲನದ ಮೇಲೆ ನಿಗಾಇಡಲು ‘ಮೈಕ್ರೋ ಚಿಪ್’ ಅಳವಡಿಸಲು ತೀರ್ಮಾನಿಸಲಾಗುವದು ಎಂದು ಹೇಳಿದರು.

ಮಾಕುಟ್ಟ ವಲಯ ನಾಂಗಾಲದಲ್ಲಿ ಮೂರು ಕಿ.ಮೀ. ಮುಚ್ಚಿಹೋಗಿರುವ ಕಂದಕವನ್ನು ಮತ್ತೇ ದುರಸ್ತಿಪಡಿಸಿಲು ಸಿಸಿಎಫ್ ಭರವಸೆ ನೀಡಿದರು. ಕೆದಮುಳ್ಳೂರು ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಈ ವ್ಯಾಪ್ತಿಯಲ್ಲಿ ಕಂದಕ ಮಾಡಬೇಕಾದ ಸ್ಥಳ ಒತ್ತುವರಿಯಾಗಿರುವದರಿಂದ ಕಂದಕ ಮಾಡದೆ ಬಾಕಿ ಉಳಿದಿದೆ. ಈ ಬಗ್ಗೆ ಒತ್ತುವರಿದಾರರ ಮನವೊಲಿಸಿ ಬಾಕಿ ಇರುವ ಕಂದಕ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವದೆಂದರು. ಅರಣ್ಯದೊಳಗಿರುವ ತೇಗದ ಮರಗಳನ್ನು ಹಂತಹಂತವಾಗಿ ತೆರವುಗೊಳಿಸಿ ನೈಸರ್ಗಿಕ ಗಿಡ ನೆಡಲಾಗುವದು. ಅರಣ್ಯ ಇಲಾಖೆಯಲ್ಲಿ ಪ್ರಕೃತಿಗೆ ಮಾರಕವಲ್ಲದ ಸಸಿ ನೆಡುವ ಯೋಜನೆ ರೂಪಿಸಲಾಗಿದೆ. ಸರ್ಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಸಹಬಾಗಿತ್ವದಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಡಿಸಿಎಫ್‍ಗಳಾದ ವನ್ಯಜೀವಿ ವಿಭಾಗದ ಎಂ.ಎಂ. ಜಯ, ಮಡಿಕೇರಿ ವಿಭಾಗದ ಸೂರ್ಯಸೇನ್, ವೀರಾಜಪೇಟೆ ವಿಭಾಗದ ಮರಿಯಾಕ್ರಿಷ್ಟಿ, ವನ್ಯಜೀವಿ ವಿಭಾಗದ ಎಸಿಎಫ್, ಆರ್‍ಎಫ್‍ಒಗಳು ಪಾಲ್ಗೊಂಡಿದ್ದರು. ಕಿಸಾನ್ ಸಂಘದ ಪದಾಧಿಕಾರಿಗಳಾದ ಕೋಟೆರ ಕಿಸಾನ್ ಉತ್ತಪ್ಪ, ನೂರೇರ ಮನೋಜ್, ಮಲ್ಲಮಾಡ ಪ್ರಭು ಪೂಣಚ್ಚ, ಸಿ.ಡಿ. ಮಾದಪ್ಪ, ವಸಂತ್, ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಬೆಳೆಗಾರರು ಪಾಲ್ಗೊಂಡಿದ್ದರು.

- ಅಣ್ಣೀರ ಹರೀಶ್ ಮಾದಪ್ಪ