ಮಡಿಕೇರಿ, ಜು. 1: ಸಮಾಜ ಕಲ್ಯಾಣ, ಐಟಿಡಿಪಿ ಮತ್ತು ಹಿಂದುಳಿದ ವರ್ಗ ಇಲಾಖೆ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿ ನಿಲಯ, ಆಶ್ರಮ ಶಾಲೆಗಳು ಹಾಗೂ ವಸತಿ ಶಾಲೆಗಳಿಗೆ ಸ್ವಂತ ನಿವೇಶನ ಇರಬೇಕು. ಸ್ವಂತ ನಿವೇಶನ ಇಲ್ಲದಿದ್ದಲ್ಲಿ ಕೂಡಲೇ ಮಾಹಿತಿಯ ಪಟ್ಟಿ ಒದಗಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯ, ಆಶ್ರಮ ಶಾಲೆ ಮತ್ತು ವಸತಿ ನಿಲಯಗಳಿಗೆ ಆದಷ್ಟು ನಿವೇಶನ ಮಂಜೂರು ಮಾಡಲಾಗಿದೆ. ಆದರೂ ನಿವೇಶನ ಇಲ್ಲ ಎಂಬದು ಕೇಳಿ ಬರಬಾರದು. ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ ಸರ್ಕಾರಿ ಜಾಗ ಪಡೆಯಲು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.

ಸರ್ಕಾರ ಪ್ರತಿ ಹೋಬಳಿ ಕೇಂದ್ರದಲ್ಲಿ ವಸತಿ ನಿಲಯ ಆರಂಭಿಸಲು ಉದ್ದೇಶಿಸಿದ್ದು, ಈ ಸಂಬಂಧ 10 ಎಕರೆ ಜಾಗ ಗುರುತಿಸುವದು. ಜಿಲ್ಲೆಯ ಯಾವ ಹೋಬಳಿ ಕೇಂದ್ರದಲ್ಲಿ ವಸತಿ ನಿಲಯವಿಲ್ಲ. ಅದರ ಬಗ್ಗೆ ಮಾಹಿತಿ ಒದಗಿಸುವಂತೆ ಕಂದಾಯ ನಿರೀಕ್ಷಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಆದಿವಾಸಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಮೂರು ಕೋಟಿ ರೂಪಾಯಿ ಮಂಜೂರಾಗಿದ್ದು, ನಿವೇಶನ ಗುರುತಿಸಬೇಕಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಗೋಣಿಕೊಪ್ಪ ಬಳಿ ಜಾಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಿದರು. ತಾಲೂಕು ಕೇಂದ್ರಗಳಲ್ಲಿ ಡಿ. ದೇವರಾಜ ಅರಸು ಭವನ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ನಗರದಲ್ಲಿ ಡಿ. ದೇವರಾಜ ಅರಸು ಭವನ ನಿರ್ಮಾಣವಾಗಿದೆ. ಹಾಗೆಯೇ ಸೋಮವಾರಪೇಟೆಯಲ್ಲಿ ಜಾಗ ಕಾಯ್ದಿರಿಸಲಾಗಿದ್ದು, ವೀರಾಜ ಪೇಟೆಯಲ್ಲಿ ಸ್ವಂತ ನಿವೇಶನ ಬೇಕಿದೆ ಎಂದು ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಅವರು ಜಿಲ್ಲೆಯ ನಾಪೋಕ್ಲು ಮತ್ತು ತೋಳೂರು ಶೆಟ್ಟಳ್ಳಿಯಲ್ಲಿ ಪ್ರಸಕ್ತ ವರ್ಷದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಕ್ಕೆ ಅನುಮೋದನೆ ದೊರೆತಿದ್ದು, ಇದಕ್ಕಾಗಿ ಸ್ವಂತ ನಿವೇಶನ ಬೇಕಿದೆ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಗತಿ ಸಾಧಿಸುವದು, ಬಸವ, ಅಂಬೇಡ್ಕರ್ ವಸತಿ ಯೋಜನೆಗಳ ಅನುಷ್ಠಾನದ ಬಗ್ಗೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಅಗತ್ಯ ಕಾಳಜಿ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ ಎಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಎಷ್ಟು ಅರ್ಜಿಗಳು ಬಾಕಿ ಇವೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಅವರು ಜಿಲ್ಲೆಯಲ್ಲಿ ಇದುವರೆಗೆ ಒಂದು ಸಾವಿರಕ್ಕೂ ಹೆಚ್ಚು ಅರಣ್ಯ ಹಕ್ಕು ಪತ್ರ ವಿತರಿಸಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ 57 ಅರ್ಜಿಗಳು ಬಾಕಿ ಇವೆ. ಹಾಗೆಯೇ 4 ಸಮುದಾಯ ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಹಲವು ಸೌಲಭ್ಯಗಳಿದ್ದು, ಸರ್ಕಾರದ ಸೌಲಭ್ಯಗಳನ್ನು ತಲಪಿಸಲು ಮುಂದಾಗಬೇಕು. ಕೊಳವೆ ಬಾವಿ, ಭೂಮಿ ಹಂಚಿಕೆ, ಸ್ವ ಉದ್ಯೋಗದಡಿ ಕೌಶಲ್ಯ ತರಬೇತಿ, ಹೀಗೆ ವಿವಿಧ ಕಾರ್ಯಕ್ರಮಗಳನ್ನು ತಲಪಿಸುವಂತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ವಿವಿಧ ನಿಗಮಗಳ ಅಧಿಕಾರಿಗಳು ಒಟ್ಟುಗೂಡಿ ಪ್ರತ್ಯೇಕ ಸಭೆ ಆಹ್ವಾನಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿರಬೇಕು. ಸ್ವಂತ ಕಟ್ಡಡ ಹೊಂದಿಲ್ಲದ ಅಂಗನವಾಡಿಗಳ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.

ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಹೀಗೆ ವಿವಿಧ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಹದ್ದುಬಸ್ತಿ ನಲ್ಲಿಟ್ಟುಕೊಳ್ಳಬೇಕು. ಯಾವದೇ ಕಾರಣಕ್ಕೂ ಒತ್ತುವರಿಗೆ ಅವಕಾಶ ನೀಡಬಾರದು, ಸರ್ಕಾರಿ ಜಾಗವನ್ನು ಸಂರಕ್ಷಿಸುವದು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಜವಾಬ್ದಾರಿ ಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ತೋಟಗಾರಿಕೆ ಇಲಾಖೆ ವ್ಯಾಪ್ತಿಯ ಮದಲಾಪುರದಲ್ಲಿ 100 ಎಕರೆ ಭೂಮಿ ಇದ್ದು, ಇದನ್ನು ಸಂರಕ್ಷಣೆ ಮಾಡಿಕೊಳ್ಳಬೇಕು. ಹಾಗೆಯೇ ಮಾದಪುರದಲ್ಲಿಯೂ ಭೂಮಿ ಇದ್ದು ಸಂರಕ್ಷಣೆ ಮಾಡಿಕೊಳ್ಳ್ಳುವತ್ತ ಗಮನ ಹರಿಸುವಂತೆ ಅವರು ಸೂಚನೆ ನೀಡಿದರು.

ಈಗಾಗಲೇ ಶಾಲೆ ಆರಂಭವಾಗಿದ್ದು, ಶಾಲೆಗಳಲ್ಲಿ ಬೈಸಿಕಲ್ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಬೇಕು. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಆರ್.ಟಿ.ಸಿ.ಗೆ ಬಾಕಿ ಇರುವ ಶಾಲೆಗಳ ಮಾಹಿತಿಯ ಪಟ್ಟಿಯನ್ನು ಒದಗಿಸುವಂತೆ ನಿರ್ದೇಶನ ನೀಡಿದರು.

ಆಶಾ ಕಾರ್ಯಕರ್ತೆಯರು ಹಾಗೂ ಎಎನ್‍ಎಂಗಳ ನೇಮಕ, ಶಿಶು ಮತ್ತು ತಾಯಿ ಮರಣ ನಿಯಂತ್ರಣ. ಆಹಾರ ಇಲಾಖೆ ವ್ಯಾಪ್ತಿಯಲ್ಲಿ ಆಧಾರ್ ಜೋಡಣೆ ಬಗ್ಗೆ ಮಾಹಿತಿ ಪಡೆದರು.

ವೀರಾಜಪೇಟೆ ತಾಲೂಕು ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳ ದಿರುವದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಆಗಸ್ಟ್ 1 ರಿಂದ ತಾಲೂಕು ಕಚೇರಿ ನಿರ್ವಹಣೆಗೆ ವ್ಯವಸ್ಥೆ ಮಾಡುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರಿಗೆ ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಮಾತನಾಡಿ, ಮಾಜಿ ಸೈನಿಕರಿಂದ ಭೂಮಿ ಮಂಜೂರಾತಿಗೆ ಸಾಕಷ್ಟು ಅರ್ಜಿಗಳು ಬಂದಿದ್ದು, ಈ ಸಂಬಂಧ ಕಂದಾಯ ನಿರೀಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸೂಚನೆ ನೀಡಿದರು. ವಿವಿಧ ಇಲಾಖೆಗಳಿಗೆ ಬೇಕಿರುವ ಜಾಗ ಸಂಬಂಧ ಆದ್ಯತೆ ಮೇಲೆ ಗುರುತಿಸಿ ಒದಗಿಸಬೇಕಿದೆ. ಆ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಎಂ. ಸತೀಶ್ ಕುಮಾರ್ ನಿರ್ದೇಶನ ನೀಡಿದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಜಿ.ಪಂ. ಉಪ ಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ರಾಮಪ್ಪ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಹಮ್ಮದ್ ಮುನೀರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಸಿ. ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್, ತಹಶೀಲ್ದಾರರಾದ ಕುಸುಮ, ಗೋವಿಂದರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮಮ್ತಾಜ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕುಮಾರ, ಸರ್ವೆ ಇಲಾಖೆಯ ಸಹಾಯಕ ನಿರ್ದೇಶಕ ಷಂಶುದ್ದೀನ್ ಇತರರು ಹಲವು ಮಾಹಿತಿ ನೀಡಿದರು.