ಮಡಿಕೇರಿ, ಜು. 1: ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮತ್ತು ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅಶುದ್ಧ ನೀರು ಕುಡಿಯುವದರಿಂದ ಕಾಲರಾ, ಕರುಳುಬೇನೆ, ವಿಷಮಶೀತ ಜ್ವರ, ಹೈಪಾಟೈಪಿಸ್, ಜಂತುಹುಳು ಸೋಂಕು ಇತರೆ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವದು ಅಗತ್ಯ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ರೋಗ ಹರಡಲು ಕಾರಣವಾದ ನೀರಿನ ಮೂಲವನ್ನು ಪತ್ತೆ ಹಚ್ಚುವದು, ಶುದ್ಧ ಕುಡಿಯುವ ನೀರು ಒದಗಿಸುವದು, ಕುದಿಸಿ, ಆರಿಸಿದ ನೀರು ಮತ್ತು ಬಿಸಿಯಾದ ಆಹಾರ ಸೇವಿಸಲು ಸಾರ್ವಜನಿಕರಿಗೆ ಮಾಹಿತಿ ನೀಡುವದು, ಶುದ್ದ ಆಹಾರ ತಯಾರಿಕೆ ಮತ್ತು ವೈಯಕ್ತಿಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಮಾಹಿತಿ ಶಿಕ್ಷಣ ಚಟುವಟಿಕೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್, ನೀರಿನ ಸುರಕ್ಷತೆ ಕಾಪಾಡಲು ಮುಂಜಾಗ್ರತಾ ಕ್ರಮ ವಹಿಸಬೇಕಿದೆ. ಕುಡಿಯುವ ನೀರಿನ ಮೂಲಗಳ ಹತ್ತಿರ ಬಳಸಿದ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು, ಬಟ್ಟೆ ಪಾತ್ರೆ ತೊಳೆದನೀರು, ಕುಡಿಯುವ ನೀರಿನ ಮೂಲಗಳಿಂದ ದೂರ ಇರುವ ಹಾಗೆ ವ್ಯವಸ್ಥೆಗೊಳಿಸುವದು.

ನೀರಿನ ಪೈಪುಗಳು ಸೋರಿಕೆಯಿದ್ದಲ್ಲಿ ತ್ವರಿತವಾಗಿ ದುರಸ್ತಿಗೊಳಿಸುವದು, ನಿಯಮಿತವಾಗಿ ಪ್ರತೀ ಹತ್ತು ದಿನಗಳಿಗೊಮ್ಮೆ ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸುವದು ಹಾಗೂ ನೀರು ತುಂಬಿದ ಮೇಲೆ ಕ್ಲೋರಿನೇಷನ್ ಮಾಡುವದು. ನೀರು ಪೂರೈಕೆ ನಲ್ಲಿಗಳು ಎತ್ತರದ ಸ್ಥಳದಲ್ಲಿ ಇರುವಂತೆ ಹಾಗೂ ಮುಚ್ಚಳವಿರುವ ನಲ್ಲಿಗಳನ್ನು ಉಪಯೋಗಿಸುವಂತೆ ಕ್ರಮ ಕೈಗೊಳ್ಳುವದು. ಮನೆಯಲ್ಲಿ ಸಂಗ್ರಹಿಸಿದ ನೀರು ಮಕ್ಕಳಕೈಗೆ ಮತ್ತು ಸಾಕು ಪ್ರಾಣಿಗಳಿಗೆ ಎಟುಕದಂತೆ ಎತ್ತರದಲ್ಲಿರಿಸಿ, ನೀರು ತೆಗೆದುಕೊಳ್ಳಲು ಹಿಡಿಕೆ ಇರುವ ಬಟ್ಟಲನ್ನು ಉಪಯೋಗಿಸುವಂತಾಗಬೇಕು ಎಂದರು.