ಮಡಿಕೇರಿ, ಜು. 1: ಹೆದ್ದಾರಿ ಬದಿಯ ಮದ್ಯದಂಗಡಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಮೂರು ತಾಲೂಕುಗಳ ಭೌಗೋಳಿಕ ಲಕ್ಷಣಗಳನ್ನು ಪರಿಗಣಿಸಿ ಸಿಕ್ಕಿಂ ಹಾಗೂ ಮೇಘಾಲಯ ರಾಜ್ಯಗಳಿಗೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ವಿನಾಯಿತಿ ಮಾದರಿಯಲ್ಲಿ ಕೊಡಗು ಜಿಲ್ಲೆಗೆ ವಿಶೇಷ ವಿನಾಯಿತಿ ನೀಡಬಹುದಾಗಿದೆ ಎಂಬ ಕುರಿತು ಜಿಲ್ಲಾ ಅಬಕಾರಿ ಇಲಾಖೆ ರಾಜ್ಯದ ಅಬಕಾರಿ ಆಯುಕ್ತರಿಗೆ ಶಿಫಾರಸ್ಸು ಮಾಡಿ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲಾ ಅಬಕಾರಿ ಆಯುಕ್ತರಾದ ಶೈಲಜಾ ಎ. ಕೋಟೆ ಅವರು ಕಳೆದ ಏಪ್ರಿಲ್ ತಿಂಗಳಿನಲ್ಲಿಯೇ ಜಿಲ್ಲೆಯ ಪರಿಸ್ಥಿತಿಯ ಕುರಿತು ವಿಸ್ತøತವಾದ ವಿಶೇಷ ವರದಿಯನ್ನು ಸಲ್ಲಿಸಿದ್ದ ವಿಚಾರ ‘ಶಕ್ತಿ'ಯ ಗಮನಕ್ಕೆ ಬಂದಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳಲ್ಲಿರುವ ಮದ್ಯ ಮಾರಾಟ ಸನ್ನದುಗಳನ್ನು ರಾಜ್ಯ / ರಾಷ್ಟ್ರೀಯ ಹೆದ್ದಾರಿಗಳ 220 ಮೀಟರ್ ಅಥವಾ 500 ಮೀಟರ್ ಹೆಚ್ಚಿನ ಅಂತರಕ್ಕೆ ಸ್ಥಳಾಂತರಿಸಲು ನೀಡಿರುವ ಆದೇಶವನ್ನು ಜಾರಿಗೊಳಿಸುವದು ಕಷ್ಟಸಾಧ್ಯವಾಗಿದೆ. ಇದಲ್ಲದೆ ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಮದ್ಯದಂಗಡಿಗಳನ್ನು ಸ್ಥಗಿತಗೊಳಿಸಲೇ ಬೇಕಾದಲ್ಲಿ ಸನ್ನದು ಇರುವ ವ್ಯಾಪ್ತಿಯ ಪ್ರದೇಶಗಳಲ್ಲಿ ಅಕ್ರಮ ಕಳ್ಳಭಟ್ಟಿ ಮತ್ತು ನಕಲಿ ಮದ್ಯದಂತಹ ನಿಯಮ ಬಾಹಿರ ಚಟುವಟಿಕೆಗಳು ಆರಂಭವಾಗುವ ಸಾಧ್ಯತೆ ಇರುವ ಕುರಿತೂ ಜಿಲ್ಲಾ ಅಬಕಾರಿ ಆಯುಕ್ತರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ವರದಿಯ ಸಾರಾಂಶ ಇಂತಿದೆ

ಕೊಡಗು ಜಿಲ್ಲೆಯಲ್ಲಿ ಒಟ್ಟು 218 ವಿವಿಧ ಬಗೆಯ ಮದ್ಯ ಮಾರಾಟ ಸನ್ನದುಗಳಿದ್ದು, 2015-16ನೇ ಸಾಲಿನ ಆರ್ಥಿಕ ವರ್ಷದಲ್ಲಿ 10,88,850/- ಪೆಟ್ಟಿಗೆಗಳು ಮತ್ತು 2016-17ನೇ ಸಾಲಿನಲ್ಲಿ 10,38,302 ಪೆಟ್ಟಿಗೆಗಳ ಮದ್ಯ ಮಾರಾಟವಾಗಿದ್ದು, ಈ ಮೂಲಕ ರಾಜ್ಯ ಸರ್ಕಾರಕ್ಕೆ ರಾಜಸ್ವ ಸಂಗ್ರಹವಾಗಿರುತ್ತದೆ. ಪ್ರಸ್ತುತ ಘನ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಜಿಲ್ಲೆಯ ಒಟ್ಟು 218 ಮದ್ಯ ಮಾರಾಟ ಸನ್ನದುಗಳ ಪೈಕಿ ಶೇ. 75ರಷ್ಟು ಸನ್ನದುಗಳು ಬಾಧೆಗೊಳಪಡಲಿದ್ದು, ಸದರಿ ಎಲ್ಲಾ ಮದ್ಯ ಮಾರಾಟ ಸನ್ನದುಗಳು ರಾಷ್ಟ್ರೀಯ / ರಾಜ್ಯ ಹೆದ್ದಾರಿಗಳಿಂದ 500 ಅಥವಾ 220 ಮೀ.ಗಿಂತಲೂ ಹೆಚ್ಚಿನ ಅಂತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ.

(ಮೊದಲ ಪುಟದಿಂದ) ಕೊಡಗು ಜಿಲ್ಲೆಯ ಒಟ್ಟು ವಿಸ್ತೀರ್ಣದಲ್ಲಿ 3 ತಾಲೂಕುಗಳ ಒಟ್ಟು ವಿಸ್ತೀರ್ಣವು 4,102 ಚ.ಕಿ.ಮೀ. ಇದ್ದು, ಸದರಿ ತಾಲೂಕುಗಳು ಪೂರ್ಣವಾಗಿ ಪಶ್ಚಿಮ ಘಟ್ಟ ಶ್ರೇಣಿಗೆ ಸೇರಿದ್ದು, ಈ ತಾಲೂಕುಗಳು ಅತೀ ಎತ್ತರವಾದ ಮತ್ತು ದಟ್ಟ ಅರಣ್ಯ ಪ್ರದೇಶಗಳಿಂದ ಆವೃತವಾದ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುತ್ತವೆ.

ಕೊಡಗು ಜಿಲ್ಲೆಯ ಒಟ್ಟು 4,102 ಚ.ಕಿ.ಮೀ. ಭೌಗೋಳಿಕ ಭೂ ಪ್ರದೇಶದಲ್ಲಿ ಅರಣ್ಯ ಪ್ರದೇಶವು 48,019.24 ಹೆಕ್ಟೇರ್ ಆವರಿಸಿದ್ದು, ಶೇ.48.43ರಷ್ಟು ಅರಣ್ಯವಾಗಿರುತ್ತದೆ. ಜಿಲ್ಲೆಯ ತಾಲೂಕುಗಳು ಪಶ್ಚಿಮ ಘಟ್ಟ ಶ್ರೇಣಿಯಿಂದ ಕೂಡಿದ್ದು, ಈ ಘಟ್ಟ ಭಾಗಗಳಲ್ಲಿ ವೈವಿಧ್ಯಮಯ ಜೈವಿಕ ಜೀವಿಗಳು ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಇದ್ದು, ಜಿಲ್ಲೆಯಲ್ಲಿ ಪುಷ್ಪಗಿರಿ ವನ್ಯಧಾಮ, ತಲಕಾವೇರಿ ವನ್ಯಧಾಮ, ಬ್ರಹ್ಮಗಿರಿ ವನ್ಯಧಾಮ ಮುಂತಾದವು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಒಳಪಡುತ್ತವೆ. ಮಡಿಕೇರಿ ತಾಲೂಕಿನ ತಲಕಾವೇರಿ ಮತ್ತು ಭಾಗಮಂಡಲ ಪ್ರದೇಶಗಳು ಹೆಚ್ಚು ಮಳೆ ಆಗುವ ಪ್ರದೇಶಗಳಾಗಿದ್ದು, ಈ ಭಾಗದಲ್ಲಿ ಅರಣ್ಯ ಪ್ರದೇಶವು ಹೆಚ್ಚಿರುತ್ತದೆ. ಅಂತೆಯೇ ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳ ಪರ್ವತ ಶ್ರೇಣಿಗಳಿರುವ ಪ್ರದೇಶಗಳು ಸಹ ಹೆಚ್ಚು ಮಳೆ ಬೀಳುವ ಪ್ರದೇಶಗಳಾಗಿದ್ದು, ಈ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕಗಳನ್ನು ಹೊರತುಪಡಿಸಿ ಬೇರೆ ಯಾವದೇ ರೀತಿಯ ಸಂಪರ್ಕ ಮಾರ್ಗಗಳು ಇರುವದಿಲ್ಲ.

ಜಿಲ್ಲೆಯ 3 ತಾಲೂಕುಗಳು ಮಲೆನಾಡು ಮತ್ತು ಅರಣ್ಯ ಪ್ರದೇಶಗಳಿಂದ ಆವೃತವಾಗಿದ್ದು, ರಸ್ತೆಯ ಅಕ್ಕಪಕ್ಕದಲ್ಲಿ ಖಾಸಗಿ ಒಡೆತನದ ಇಳಿಜಾರಿನ ಕಾಫಿ ತೋಟಗಳು ಮತ್ತು ಮೀಸಲು ಅರಣ್ಯ ಪ್ರದೇಶಗಳು ಇರುವದು ಕಂಡು ಬರುತ್ತದೆ. ಅಂತೆಯೇ ಕೆಲವೊಂದು ರಸ್ತೆಯ ಒಂದು ಬದಿಯಲ್ಲಿ ಕಡಿದಾದ ಬೆಟ್ಟಗುಡ್ಡಗಳಿದ್ದು, ಇನ್ನೊಂದು ಬದಿಯಲ್ಲಿ ಗಾಢವಾದ ಪ್ರಪಾತವಿರುತ್ತದೆ.

ರಸ್ತೆ ಸಂಪರ್ಕ ಬಿಟ್ಟು ಸಾಗಿದಲ್ಲಿ ಅರಣ್ಯ ಅಥವಾ ಖಾಸಗಿ ಒಡೆತನಕ್ಕೆ ಸೇರಿದ ಕಾಫಿ ತೋಟಗಳು ಕಂಡು ಬರುವ ಕಾರಣ ನ್ಯಾಯಾಲಯದ ಆದೇಶಗಳಂತೆ ಜಿಲ್ಲೆಯ 3 ತಾಲೂಕುಗಳಲ್ಲಿರುವ ಮದ್ಯ ಮಾರಾಟ ಸನ್ನದುಗಳನ್ನು ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಿಂದ 220 ಮೀ. ಹೆಚ್ಚಿನ ಅಂತರಕ್ಕೆ ಸ್ಥಳಾಂತರಿಸಲು ಸ್ಥಳಾವಕಾಶದ ಕೊರತೆ ಇದೆ ಎಂಬದಾಗಿ ಜಿಲ್ಲಾ ಆಯುಕ್ತರು ಇಲಾಖೆಯ ಗಮನಕ್ಕೆ ತಂದಿದ್ದರು. ಆದರೆ ಈ ಬಗ್ಗೆ ಉನ್ನತ ಮಟ್ಟದಲ್ಲಿ ಹಾಗೂ ವರ್ತಕರಿಂದ ಸೂಕ್ತ ಪ್ರಯತ್ನ ನಡೆಯದ ಕಾರಣ ಬಾಧೆಗೊಳಗಾಗಿರುವ ಸನ್ನದುಗಳು ಇದೀಗ ಅನಿವಾರ್ಯವಾಗಿ ಮುಚ್ಚಲ್ಪಟ್ಟಿವೆ.