ಮಾಡಲಾಗುತ್ತಿದೆ. ಆದರೆ ಕೃತಕ ಅಣಬೆಗಳಿಗಿಂತ ನೈಸರ್ಗಿಕವಾಗಿ ಬೆಳೆಯುವ ಅಣಬೆಗಳೆ ಹೆಚ್ಚು ಸ್ವಾಧದಿಂದ ಕೂಡಿರುತ್ತದೆ ಎನ್ನುತ್ತಾರೆ ಬಳಕೆದಾರರು.

ಅಣಬೆಗಳ ಕೊಡೆಯಾಕಾರದ ತಳಭಾಗದಲ್ಲಿ ಇರುವ ಹಾಳೆ ಪದರಗಳಂಥ ರಚನೆಗಳೇ ಕಿವಿರುಗಳು. ಕೊಡೆಯ ಆಕಾರಗಳಲ್ಲಿ ವೈವಿಧ್ಯಗಳಿದ್ದು ಇವುಗಳ ಆಧಾರದಲ್ಲಿ ಅಣಬೆಗಳನ್ನು ವರ್ಗೀಕರಿಸಲಾಗಿದೆ. ರಂಗುರಂಗಿನ ಅಮನೀಟಾ, ಸಿಸೇರಿಯ ಅರಳಿದ ಹೂವಿನಂತೆ ಕಾಣುವ ಹಳದಿ ಬಣ್ಣದ ಚಾನೈರೆಲ್ಲಾ, ಚೆಂಡಿನಾಕಾರದ ಕ್ಲಾವೇಶಿಯಾ, ಜೈಗಾಂಟಿಕಾ, ಹಕ್ಕಿಗೂಡಿನಂತಿರುವ ಬಡ್ರ್ಸ್ ನೆಸ್ಟ್, ನಿಡ್ಯುಲಾ ಕ್ಯಾಂಡಿಡಾ, ಕೋಳಿ ಮಾಂಸದಂತಿರುವ ಚಿಕನ್ ಇನ್ ವುಡ್, ರಾತ್ರಿ ಹೊಳೆಯುವ ವಿಷಕಾರಿ ಜಾಕೋಲ್ಯಾಂಡ್ರಿನ್, ಬಿಳಿ ಬಟನ್ ಆಯಿಸ್ಟರ್ ಹೀಗೆ ಅನೇಕ ಹೆಸರುಗಳ ಅಣಬೆಗಳ ಬೆಡಗು ಬಿನ್ನಾಣಕ್ಕೆ ಅವುಗಳೇ ಸಾಟಿ.

ಅಣಬೆಗಳ ಜೀವನ ಶೈಲಿಯೇ ವಿಶಿಷ್ಟ. ಈ ಅಣಬೆಗಳಿಗೆ ಹಲವು ಬಣ್ಣ. ಬಗೆಬಗೆಯ ಆಕಾರ. ಗಾತ್ರ. ಅಣಬೆಗಳು ಕೊಳೆತು ನಾರುವ ವಸ್ತುಗಳ ಮೇಲೆ, ಮರಗಳ ಕಾಂಡಗಳ ಮೇಲೆ, ಸಗಣಿಯ ಮೇಲೆ, ಕೊಳೆತ ಎಲೆಗಳ ಮೇಲೆ ಹೀಗೆ ಹತ್ತು ಹಲವು ಸ್ಥಳಗಳಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಬಿಡುತ್ತವೆ. ಇವುಗಳು ಒಂದೆರಡು ದಿನಗಳಲ್ಲಿ ಕೊಳೆತು ಕಣ್ಮರೆಯಾದರೆ, ಒಣಗಿದ ಮರದ ರೆಂಬೆ, ಕೊಂಬೆಗಳ ಮೇಲೆ ಬೆಳೆಯುವ ಅಣಬೆಗಳು ತಿಂಗಳುಗಳ ಕಾಲ ಅಷ್ಟೇ ಏಕೆ ವರ್ಷಗಳ ಕಾಲವು ಇರುತ್ತವೆ.

ಇವು ಶಿಲೀಂಧ್ರ ಸಸ್ಯಗಳು. ಆದರೆ ಕೊಂಬೆ, ರೆಂಬೆ. ಬೇರು ಎಲೆಗಳಿಂದ ವಂಚಿತವಾಗಿದೆ. ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲಾರವು. ಒಂದರ್ಥದಲ್ಲಿ ಇವು ಜೀವಿ-ನಿರ್ಜೀವಿಗಳ ನಡುವೆ ಸಂಬಂಧ ಕಲ್ಪಿಸುವ ಕೊಂಡಿಗಳು ಅಣಬೆಯನ್ನು ಕಿತ್ತಾಗ ನೆಲದೊಳಗೆ ಹುದುಗಿ ಬೇರಿನಂತೆ ಕಾಣುವ ಬಿಳಿ ದಂಟುಗಳೇ ಈ ಸಸ್ಯದ ಮುಖ್ಯ ಅಂಗ ಇದಕ್ಕೆ ಹೈಫ್ ಎನ್ನುತ್ತಾರೆ. ಭೂಮಿಯ ಮೇಲ್ಭಾಗಕ್ಕೆ ಛತ್ರಿಯಂತೆ ಬೆಳೆಯುವ ಭಾಗ ಸಸ್ಯದ ಫಲಕಾಯಗಳು.

ಅಣಬೆಗಳನ್ನು ಮುಖ್ಯವಾಗಿ ಆಹಾರಕ್ಕಾಗಿ ಬಳಸುವ ಮತ್ತು ಬಳಸದಿರುವ ಅಣಬೆಗಳೆಂದು ವಿಂಗಡಿಸಬಹುದು. ಕೆಲವು ಅಣಬೆಗಳು ವಿಷಕಾರಕ ಗುಣವನ್ನು ಹೊಂದಿದ್ದು ಅಣಬೆಯನ್ನು ಉಪಯೋಗಿಸುವಾಗ ಜಾಗೃತೆ ವಹಿಸುವದು ಮುಖ್ಯವಾಗಿದೆ. - ಪಿ.ವಿ. ಪ್ರಭಾಕರ್