ಸೋಮವಾರಪೇಟೆ, ಜು. 1: ರೈತರು ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲವನ್ನು 50 ಸಾವಿರದವರೆಗೆ ರಾಜ್ಯ ಸರ್ಕಾರ ಮನ್ನಾ ಮಾಡಿದ್ದು, ಅದರಂತೆ ವಾಣಿಜ್ಯ ಬ್ಯಾಂಕ್‍ಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕೆಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತರ 50 ಸಾವಿರದವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ಇದರಲ್ಲಿ ಕೊಡಗಿನ 33 ಸಾವಿರ ಮಂದಿ ಪ್ರಯೋಜನ ಪಡೆಯಲಿದ್ದಾರೆ. ಜಿಲ್ಲೆಯ 12 ಸಾವಿರ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ ಎಂದರು. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭವೂ 72 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಲಾಗಿತ್ತು. ಕೊಡಗಿಗೆ 32 ಕೋಟಿ ರೂಪಾಯಿ ಮನ್ನಾ ಆಗಿತ್ತು. ರಾಜ್ಯದಲ್ಲಿ ಇದೀಗ ವಾಣಿಜ್ಯ ಬ್ಯಾಂಕ್‍ಗಳಲ್ಲಿ 45 ಸಾವಿರ ಕೋಟಿ ಸಾಲವಿದ್ದು, ಇದನ್ನು ಕೇಂದ್ರದ ಬಿಜೆಪಿ ಸರ್ಕಾರ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ರೈತವಿರೋಧಿ ನೀತಿಯನ್ನು ವಿರೋಧಿಸಿ ತಾ. 3 ರಂದು ಪೂರ್ವಾಹ್ನ 11 ಗಂಟೆಗೆ ಸೋಮವಾರಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು. ರಾಜ್ಯ ಸರ್ಕಾರ ರೈತಪರ ಆಡಳಿತ ನಡೆಸುತ್ತಿದ್ದು, ಬಿಜೆಪಿಯವರು ವೃಥಾ ಆರೋಪದಲ್ಲಿ ತೊಡಗಿದ್ದಾರೆ. ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗಳಿಗೂ ತಲಪಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುವದು. ಈ ಬಗ್ಗೆ ರಾಜ್ಯ ನಾಯಕರು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು. ಸರ್ಕಾರ ಕೊಡಗಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‍ಗಳ ಮೂಲಕ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಆದ್ಯತೆಯ ಮೇರೆ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿದೆ ಎಂದು ಕೆ.ಎಂ. ಲೋಕೇಶ್ ತಿಳಿಸಿದರು.

ಪಕ್ಷದ ಮುಖಂಡ ಹೆಚ್.ಸಿ. ನಾಗೇಶ್ ಮಾತನಾಡಿ, ಕೊಡಗಿನ ಹಲವು ಪ್ರದೇಶಗಳನ್ನು ಸೂಕ್ಷ್ಮ ಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆ ಗೊಳಿಸುತ್ತಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವದು ಹಾಸ್ಯಾಸ್ಪದ. ರಾಜ್ಯ ಸರ್ಕಾರ ವರದಿಯನ್ನು ವಿರೋಧಿಸಿ ಕೇಂದ್ರಕ್ಕೆ ಕಳುಹಿಸಿದ್ದರೂ ಕೇಂದ್ರ ಸರ್ಕಾರ ವರದಿಯ ಆಶಯಗಳನ್ನು ಬದಿಗೊತ್ತಿ ಅನುಷ್ಠಾನಗೊಳಿಸುತ್ತಿದೆ ಎಂದು ದೂರಿದರು. ಗೋಷ್ಠಿಯಲ್ಲಿ ಮಡಿಕೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಹಾನಗಲ್ಲು ಮಿಥುನ್, ಪಕ್ಷದ ವಕ್ತಾರ ಹಾಗೂ ತಾ.ಪಂ. ಸದಸ್ಯ ತಾಕೇರಿ ಸತೀಶ್, ಮುಖಂಡರಾದ ತಾಕೇರಿ ಈರಪ್ಪ ಉಪಸ್ಥಿತರಿದ್ದರು.