ಮಡಿಕೇರಿ, ಜು.1: ರೋಟರಿ ಜಿಲ್ಲೆ 3181 ರ ನೂತನ ಗವರ್ನರ್ ಆಗಿ ಮಡಿಕೇರಿಯ ಮಾತಂಡ ಸುರೇಶ್ ಚಂಗಪ್ಪ ಅಧಿಕಾರ ವಹಿಸಿಕೊಂಡಿದ್ದು, ಸಾಮಾಜಿಕ ಕಾರ್ಯಯೋಜನೆಗಳ ಮೂಲಕ ರೋಟರಿ ಸಂಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹಲವಾರು ಕಾಯಕ್ರಮ ಯೋಜಿಸಿರುವದಾಗಿ ಹೇಳಿದರು.ನಗರದಲ್ಲಿ ಜರುಗಿದ ಪದಗ್ರಹಣ ಸಮಾರಂಭದಲ್ಲಿ ಈ ಹಿಂದಿನ ರೋಟರಿ ಜಿಲ್ಲಾ ಗವರ್ನರ್ ಡಾ. ನಾಗಾರ್ಜುನ ಅವರಿಂದ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳಿಗೆ ಸೇರಿದ ರೋಟರಿ ಜಿಲ್ಲೆ 3181 ರ ಗವರ್ನರ್ ಆಗಿ ಮಾತಂಡ ಸುರೇಶ್ ಚಂಗಪ್ಪ ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲೆಗೆ ಕೊಡಗು ಜಿಲ್ಲೆಯಿಂದ ಈವರೆಗೆ ಮೂರು ಗವರ್ನರ್‍ಗಳು ನೇಮಕಗೊಂಡಿದ್ದು, ಸುರೇಶ್ ಚಂಗಪ್ಪ ನಾಲ್ಕನೇ ಗವರ್ನರ್ ಆಗಿ ಅಧಿಕಾರ ಪಡೆದಿದ್ದಾರೆ.

ಈ ಸಂದರ್ಭ ಮಾತನಾಡಿದ ಮಾತಂಡ ಸುರೇಶ್ ಚಂಗಪ್ಪ, ಮುಂದಿನ 1 ವರ್ಷದಲ್ಲಿ ರೋಟರಿ ಜಿಲ್ಲೆ 3181 ಮೂಲಕ ಜಿಲ್ಲೆಯ 73 ಕ್ಲಬ್ ಗಳಲ್ಲಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ 1 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಪ್ರತೀ ರೋಟರಿ ಸದಸ್ಯನೂ ತಲಾ 1 ಗಿಡವನ್ನು ಪೋಷಿಸುವ ಕಾರ್ಯಕ್ರಮ ರೂಪಿಸಲಾಗಿದೆ.

(ಮೊದಲ ಪುಟದಿಂದ) ಸ್ವಚ್ಛ ಅಭಿಯಾನ ಕಾರ್ಯಕ್ರಮದಡಿ ರೋಟರಿ ಅಧೀನದ ಇಂಟರ್ಯಾಕ್ಟ್ , ರೋಟರ್ಯಾಕ್ಟ್ ಕ್ಲಬ್ ಸದಸ್ಯರು ಸ್ವಚ್ಛ ವಾತಾವರಣದ ಕನಸು ನನಸಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದಲ್ಲಿನ ವಿದ್ಯುತ್ ರಹಿತ ಮನೆಗಳಿಗೆ ರೋಟರಿ ವತಿಯಿಂದ ರೂ. 4 ಕೋಟಿ ವೆಚ್ಚದಲ್ಲಿ ವಿದ್ಯುತ್ ದೀಪ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಮಳೆ ಕೊಯ್ಲು ಸೇರಿದಂತೆ ವಿವಿಧ ರೀತಿಯ ಪರಿಸರ, ಜನ ಸಂರಕ್ಷಣೆಯ ಯೋಜನೆ ಆಯೋಜಿತವಾಗಿದ್ದು ಇವೆಲ್ಲಾ ರೋಟರಿಯ ಈ ಸಾಲಿನ ಪ್ರಮುಖ ಕಾರ್ಯಕ್ರಮವಾಗಿದೆ ಎಂದು ತಿಳಿಸಿದ ಸುರೇಶ್ ಚಂಗಪ್ಪ, ಅಗತ್ಯವುಳ್ಳವರಿಗೆ ರೋಟರಿಯ ಸೇವೆಗಳನ್ನು ಸಮರ್ಪಕವಾಗಿ ನೀಡುವ ಹೊಣೆಗಾರಿಕೆ ಗವರ್ನರ್ ಆಗಿ ತನ್ನ ಮೇಲಿದೆ ಎಂದು ಸುರೇಶ್ ಚಂಗಪ್ಪ ಹೇಳಿದರು.

ಮುಂದಿನ ಜನವರಿ 27 ರಿಂದ 29 ರವರೆಗೆ ಮಡಿಕೇರಿಯಲ್ಲಿ ರೋಟರಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸುರೇಶ್ ಚಂಗಪ್ಪ ಪ್ರಕಟಿಸಿದರು.

ರೋಟರಿಯ ನಿಗರ್ಮಿತ ಗವರ್ನರ್ ಡಾ. ನಾಗಾರ್ಜುನ ಮಾತನಾಡಿ, ಅತ್ಯಂತ ಯಶಸ್ವಿಯಾಗಿ ಕಳೆದ ಸಾಲಿನಲ್ಲಿ ರೋಟರಿ ಜಿಲ್ಲೆ ಕಾರ್ಯನಿರ್ವಹಿಸಿದೆ. 225 ಸದಸ್ಯರು ಜಿಲ್ಲೆಯಲ್ಲಿ ಪೌಲ್ ಹಾರಿಸ್ ಫೆಲೋಗಳಾಗಿದ್ದು, ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ ಜಿಲ್ಲೆಯಿಂದ ಶೇ. 100ರಷ್ಟು ಕೊಡುಗೆ ನೀಡಲಾಗಿದೆ. ರೂ. 2.60 ಕೋಟಿ ಮೌಲ್ಯದ ಜಾಗತಿಕ ಯೋಜನೆಗಳು 3181 ಜಿಲ್ಲೆಗೆ ಅಂತರರಾಷ್ಟ್ರೀಯ ಮಟ್ಟದ ರೋಟರಿ ಸಂಸ್ಥೆಗಳಿಂದ ದೊರಕಿದೆ ಎಂದು ವಿವರಿಸಿದರು. ನಮ್ಮ ಹಳ್ಳಿ ಯೋಜನೆಯನ್ನು 37 ಕ್ಲಬ್‍ಗಳು ಜಾರಿಗೊಳಿಸಿದೆ. ನಮ್ಮ ಮಕ್ಕಳು ಯೋಜನೆಯಡಿ 50 ಸಾವಿರ ಮಕ್ಕಳಿಗೆ ರೋಟರಿಯ ವಿವಿಧ ಸೇವಾ ಯೋಜನೆ ನೀಡಲಾಗಿದೆ. ಡಯಾಬಿಟೀಸ್ ಬಗೆಗಿನ ತಪಾಸಣೆ ಕಾರ್ಯಕ್ರಮದಡಿ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಚಿಕಿತ್ಸೆ ಗೊಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಸೂರ್ಯಪ್ರಕಾಶ್ ಭಟ್ ಮಾತನಾಡಿ, ಸಾಕಷ್ಟು ಹೊಂಗನಸು ಹೊತ್ತಿರುವ ಕನಸುಗಾರರಿರುವ ರೋಟರಿ ತಂಡ ಮುಂದಿನ ಒಂದು ವರ್ಷ ಜನಸೇವೆಯಲ್ಲಿ ಸಕ್ರಿಯವಾಗಲಿದ್ದಾರೆ ಎಂದು ಬಣ್ಣಿಸಿದರಲ್ಲದೇ, ರೋಟರಿ ಸಂಸ್ಥೆ ಜನಹಿತದಿಂದ ಜಾರಿಗೊಳಿಸಿದ್ದ ಅನೇಕ ಯೋಜನೆಗಳ ಸಫಲತೆ ಗಮನಿಸಿ ಸರ್ಕಾರ ಕೂಡ ನಂತರದ ದಿನಗಳಲ್ಲಿ ಯೋಜನೆಗಳನ್ನು ಸರ್ಕಾರದ ವತಿಯಿಂದಲೇ ಕೈಗೆತ್ತಿಕೊಂಡ ಉದಾಹರಣೆಗಳಿವೆ ಎಂದು ಶ್ಲಾಘಿಸಿದರು. ಜಿಲ್ಲಾ ಯೋಜನೆಗಳನ್ನು ಮಾಜಿ ಗವರ್ನರ್ ಡಾ. ಎಸ್. ಭಾಸ್ಕರ್, ಭೂರಮೆ ಹೆಸರಿನ ಗವರ್ನರ್ ಅವರ ವಾರ್ತಾ ಸಂಚಿಕೆಯನ್ನು ಮುಂದಿನ ಸಾಲಿನ ಗವರ್ನರ್ ಪಿ. ರೋಹಿನಾಥ್, ವೆಬ್‍ಸೈಟ್ ಹಾಗೂ ರೈಡ್ ಫಾರ್ ರೋಟರಿ ಯೋಜನೆಯನ್ನು ಜೋಸೆಫ್ ಮ್ಯಾಥ್ಯು ಅನಾವರಣಗೊಳಿಸಿದರು. ಚಿತ್ರಾ ಹರೀಶ್ ಪ್ರಾರ್ಥಿಸಿ, ವಿನುತಾ ಕರುಂಬಯ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಮೋಹನ್ ಕರುಂಬಯ್ಯ, ಕೆ.ಕೆ. ವಿಶ್ವನಾಥ್, ಕೆ.ಎಂ. ಕರುಂಬಯ್ಯ, ಅತಿಥಿ ಪರಿಚಯಿಸಿ, ಎಂ.ಈಶ್ವರ ಭಟ್ ವಂದಿಸಿದರು.

ನೂತನ ಗವರ್ನರ್ ಪದಗ್ರಹಣ ಕಾರ್ಯಕ್ರಮದಲ್ಲಿ ದಮಯಂತಿ ಚಂಗಪ್ಪ, 9 ವಲಯಗಳ ಅಸಿಸ್ಟೆಂಟ್ ಗವರ್ನರ್‍ಗಳು ಸೇರಿದಂತೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ನೂರಾರು ರೋಟರಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.