ಮಡಿಕೇರಿ, ಜು. 1: ‘ಹೊಸ ಅಲೆ ಹೊಸ ವಿಶ್ವಾಸ’ “ಸಂಪೂರ್ಣ ಜವಾಬ್ದಾರಿಯೊಂದಿಗೆ ಪರಿವಾರ ವಿಕಾಸ” ಎಂಬ ಘೋಷ ವಾಕ್ಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಮ್ಮಿಕೊಳ್ಳುವ ಕುರಿತು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಈ ಸಂದರ್ಭ ಮಾಹಿತಿ ನೀಡಿದ ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶಾ ಅವರು, ಜನಸಂಖ್ಯಾ ಸ್ಪೋಟದಿಂದ ಆಗುವ ಪರಿಣಾಮಗಳು ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 5,59,465 ಜನಸಂಖ್ಯೆ ಇದ್ದು, 80,971 ದಂಪತಿಗಳು, 4,889 ಒಂದು ಮಗು ಒಳಗೊಂಡಿರುವವರು, 2,595 ಮಂದಿ ಎರಡು ಮಗು ಇರುವವರು, 1,216 ಮಂದಿ ಮೂರು ಮಕ್ಕಳನ್ನು ಹೊಂದಿರುವವರು, 477 ನಾಲ್ಕು ಮಕ್ಕಳನ್ನು ಹೊಂದಿರುವವರು ಹಾಗೂ 415 ಮಂದಿ 5 ಮತ್ತು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರ ಸಂಖ್ಯೆ ಇದೆ ಎಂದು ಮಾಹಿತಿ ನೀಡಿದರು.

ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ತಾ. 11 ರಂದು ಆಯೋಜಿಸಲಾಗುತ್ತಿದ್ದು, ತಾ. 11 ರಿಂದ 24 ರವರೆಗೆ ಜನಸಂಖ್ಯೆ ಸ್ಥಿರೀಕರಣ ಪಾಕ್ಷಿಕ ಜನಸಂಖ್ಯಾ ಸ್ಪೋಟ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ತಾ. 11 ರಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಕ್ಷಣ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್, ಪುಟ್ಟಪ್ಪ ಮತ್ತಿತರರು ಇದ್ದರು.