ಮಡಿಕೇರಿ, ಜು. 1: ಕರ್ನಾಟಕಕ ರಾಜ್ಯ ಸರಕಾರವು ರೂ. 50 ಸಾವಿರ ಮೊತ್ತದ ತನಕ, ಸಹಕಾರ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಿರುವ ಪರಿಣಾಮ, ಕೊಡಗು ಜಿಲ್ಲೆಯ ಸುಮಾರು 12 ಸಾವಿರದ ಒಂದು ನೂರ ಇಪ್ಪತ್ತು ಮಂದಿಗೆ ಈ ಭಾಗ್ಯ ಲಭಿಸುವ ಸಾಧ್ಯತೆ ಇದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ರೈತರು ಪಡೆದಿರುವ ಸಾಲದ ಮೊತ್ತವನ್ನು ರಾಜ್ಯ ಸರಕಾರ ಶೀಘ್ರವೇ ಬ್ಯಾಂಕ್‍ಗಳಿಗೆ ತುಂಬಿದರೆ, ಆದಷ್ಟು ಬೇಗನೆ ರೈತರಿಗೆ ಸಾಲಮನ್ನಾ ಭಾಗ್ಯ ದೊರಕಲಿದೆ ಎಂದು ಬ್ಯಾಂಕ್ ಮೂಲಗಳು ಸುಳಿವು ನೀಡಿವೆ.

ರೂ. 145 ಕೋಟಿ

ಜಿಲ್ಲೆಯ ಸುಮಾರು 12,120 ಮಂದಿ ರೈತರಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ರೂ. 50 ಸಾವಿರ ಮೊತ್ತದಷ್ಟು ಸಾಲ ರೂಪದಲ್ಲಿ ನೀಡಿರುವ ಹಣ ರೂ. 145 ಕೋಟಿ, 75 ಲಕ್ಷದ ಹದಿಮೂರು ಸಾವಿರ ಮೊತ್ತವನ್ನು ಸರಕಾರವು ಭರಿಸಬೇಕೆಂದು ಮೂಲಗಳು ತಿಳಿಸಿವೆ. ಈ ಮೊತ್ತದ ಹಣವನ್ನು ಸರಕಾರ ತುಂಬದಿದ್ದರೆ, ಸಹಕಾರ ಸಂಸ್ಥೆ ಭಾರೀ ನಷ್ಟ ಅನುಭವಿಸಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ.

ಅಲ್ಲದೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಜಿಲ್ಲೆಯ ಕೃಷಿಕರು ರೂ. 467 ಕೋಟಿ 76 ಲಕ್ಷ ಮೊತ್ತದಷ್ಟು ಈಗಾಗಲೇ ಸಾಲ ಸೌಲಭ್ಯ ಪಡೆದಿದ್ದು, ಬ್ಯಾಂಕಿಗೆ ಮರುಪಾವತಿಸಬೇಕಿದೆ. ಇನ್ನು ರೂ. 8 ಕೋಟಿ 97 ಲಕ್ಷದ 98 ಸಾವಿರದಷ್ಟು ಹಳೆಯ ಸಾಲ ಮರುಪಾವತಿಯಾಗದೆ ಬಾಕಿ ಇದೆ.

33,702 ಮಂದಿ ಸಾಲಗಾರರು

ಇನ್ನು ಜಿಲ್ಲೆಯಲ್ಲಿ ವಿವಿಧ ಬಾಪ್ತು ಸಾಲ ಹೊಂದಿರುವವರ ಸಂಖ್ಯೆ 33,702 ಮಂದಿಯಾದರೆ, ಮೇಲ್ಕಾಣಿಸಿದ ಸಾಲದ ಮೇಲಿನ ಬಡ್ಡಿ ಹಣವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಮೊತ್ತ ರೂ. ಒಂದು ಕೋಟಿ, ಎಪ್ಪತ್ತಾರು ಲಕ್ಷದ 90 ಸಾವಿರ ಬ್ಯಾಂಕಿಗೆ ಲಭಿಸಬೇಕಿದೆ. ಇದುವರೆಗೆ ಬಡ್ಡಿ ರೂ. 31.42 ಕೋಟಿಯಷ್ಟಿದೆ.

ಸಾಲ ಪಾವತಿಸಿದರೂ ಮನ್ನಾ

ಬ್ಯಾಂಕ್ ಮೂಲಗಳ ಪ್ರಕಾರ ಈಗಾಗಲೇ ಸಾಲ ಪಡೆದಿರುವ ರೈತರು ವಾಯಿದೆ ಮೀರಿ ಮರು ಪಾವತಿಸದಿದ್ದರೆ, ತಮ್ಮ ಸಾಲವನ್ನು ಮುಂದಿನ ಡಿಸೆಂಬರ್ 31 ರೊಳಗೆ ಪಾವತಿಸಿದರೆ ಅಂತವರಿಗೆ ರಾಜ್ಯ ಸರಕಾರದಿಂದ ರೂ. 50 ಸಾವಿರ ಮೊತ್ತದ ಸಾಲ ಮನ್ನಾ ಸೌಲಭ್ಯ ಲಭಿಸಲಿದೆ.

ಇದರೊಂದಿಗೆ ಚಾಲ್ತಿಯಲ್ಲಿರುವ ಸಾಲ ಸೌಲಭ್ಯವನ್ನು 20.6.2018ರೊಳಗೆ ಮರು ಪಾವತಿಸುವ ಎಲ್ಲಾ ರೈತ ಸಮುದಾಯಕ್ಕೂ ರೂ. 50 ಸಾವಿರ ತನಕ ಸರಕಾರದ ಸಾಲಮನ್ನಾ ಯೋಜನೆ ಲಭಿಸಲಿದೆ. ಇನ್ನು ಜಿಲ್ಲೆಯ ಎಲ್ಲ ಸಹಕಾರ ಸಂಸ್ಥೆಗಳಲ್ಲಿ ರೂ. 3 ಲಕ್ಷ ತನಕ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ.

ರೂ 5 ಲಕ್ಷ ಮೇಲ್ಪಟ್ಟ ಸಾಲ

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ನೇರವಾಗಿ ರೂ. 5 ಲಕ್ಷ ಮೇಲ್ಪಟ್ಟು ಸಾಲ ಸೌಲಭ್ಯ ಹೊಂದಬಹುದಾಗಿದ್ದು, ಶೇ. 10.75 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

ಸಾಲ ಮನ್ನಾ ಪ್ರ್ರಯೋಜನಕಾರಿ

ಈಗಾಗಲೇ ರಾಜ್ಯ ಸರಕಾರವು ರೂ. 50 ಸಾವಿರ ತನಕ ಸಹಕಾರ ಸಂಸ್ಥೆಗಳಲ್ಲಿನ ರೈತರ ಸಾಲ ಮನ್ನಾ ಮಾಡಿರುವದು ಸಣ್ಣ ಹಾಗೂ ತೀರಾ ಅತಿ ಸಣ್ಣ ರೈತರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟಿರುವ ಬ್ಯಾಂಕ್ ಮೂಲಗಳು, ಸರಕಾರವು ಎಷ್ಟು ಶೀಘ್ರವಾಗಿ ಬ್ಯಾಂಕ್‍ಗಳಿಗೆ ಸಾಲದ ಮೊತ್ತ ಬಿಡುಗಡೆಗೊಳಿಸುವದೋ; ಅಷ್ಟೇ ಬೇಗನೆ ಫಲಾನುಭವಿಗಳಿಗೆ ಸೌಲಭ್ಯ ತಲಪಲಿದೆ ಎಂದು ಗಮನ ಸೆಳೆದಿದ್ದಾರೆ.