ಮಡಿಕೇರಿ, ಜು. 1: ಜಿಲ್ಲೆಯಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ 500 ಮೀಟರ್ ಅಥವಾ 220 ಮೀಟರ್ ವ್ಯಾಪ್ತಿ ಯೊಳಗೆ ಬರುವ ಮದ್ಯದಂಗಡಿ, ಬಾರ್‍ಗಳಲ್ಲಿ ಇಂದಿನಿಂದ ವಹಿವಾಟು ಸ್ಥಗಿತಗೊಂಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಿಯಮಾನುಸಾರ ಈ ಸನ್ನದುಗಳನ್ನು ಮುಚ್ಚಲೇಬೇಕಾದ ಹಿನ್ನೆಲೆಯಲ್ಲಿ ವ್ಯಾಪಾರ ತಡೆಹಿಡಿಯಲ್ಪಟ್ಟಿದೆ. ಜೂನ್ 30 ಅಬಕಾರಿ ವರ್ಷದ ಕೊನೆಯ ದಿನಾಂಕವಾಗಿದ್ದು, ಜುಲೈ 1 ರಿಂದ ಹೊಸದಾಗಿ ನವೀಕರಣ ವಾಗಬೇಕಿದ್ದು, ಜಿಲ್ಲೆಯಲ್ಲಿ ವಿವಿಧ ಪರವಾನಗಿಯಂತೆ ವಹಿವಾಟು ನಡೆಸುತ್ತಿದ್ದ 218 ಸನ್ನದುಗಳ ಪೈಕಿ 2017-18ನೇ ಸಾಲಿಗೆ ಪ್ರಸ್ತುತ ಕೇವಲ 98 ಮಳಿಗೆಗಳು ಮಾತ್ರ ನವೀಕರಣಗೊಂಡಿದೆ. ಹೆದ್ದಾರಿಯ ಬಿಸಿ ತಟ್ಟದ ಹಾಗೂ ಸೋಮವಾರ ಪೇಟೆ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿಗಳನ್ನು ಹೊರತುಪಡಿಸಿ ಇತರ ಸನ್ನದುಗಳಿಗೆ ಈಗಿರುವ ಸ್ಥಳದಿಂದ ಸ್ಥಳಾಂತರಗೊಳಿಸದೆ ಪರವಾನಗಿ ನವೀಕರಣವಾಗದು. ಇಂತಹ ಸನ್ನದುಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಸ್ಥಳಾಂತರಗೊಳಿಸಿದಲ್ಲಿ ಮಾತ್ರ ಪರವಾನಗಿ ನವೀಕರಣವಾಗಲಿದೆ. ಸರಕಾರಿ ಮಳಿಗೆಯಾದ ನಾಲ್ಕು ಎಂ.ಎಸ್.ಐ.ಎಲ್. ಮಳಿಗೆಗಳೂ ಸ್ಥಳಾಂತರವಾಗಬೇಕಿದೆ.

ಪರವಾನಗಿ ಹೊಂದಿರುವ ಕ್ಲಬ್‍ಗಳು ಈಗಿನ ಆದೇಶದಿಂದ ಹೊರತಾಗಿದ್ದು, ಎಂದಿನಂತೆ ಮುಂದುವರಿಯಲಿದೆ. ಪ್ರಸ್ತುತ ಮಡಿಕೇರಿ ತಾಲೂಕಿನಲ್ಲಿ 35, ಸೋಮವಾರಪೇಟೆ ತಾಲೂಕಿನಲ್ಲಿ 27 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 36 ಸೇರಿದಂತೆ ಒಟ್ಟು 98 ಪರವಾನಗಿ ಮಾತ್ರ ನವೀಕರಣವಾಗಿದೆ.

ಸಂಕಷ್ಟದಲ್ಲಿ ಸಿ.ಎಲ್.7 ಪರವಾನಗಿದಾರರು : ನ್ಯಾಯಾಲಯದ ಆದೇಶದ ಪರಿಣಾಮವಾಗಿ

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ವಿವಿಧ ರೀತಿಯ ಒಟ್ಟು 122 ಪರವಾನಗಿ ನವೀಕರಣವಾಗದೆ ತಡೆಹಿಡಿ ಯಲ್ಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ 20, ಸೋಮವಾರಪೇಟೆಯಲ್ಲಿ ತಾಲೂಕಿನಲ್ಲಿ 54 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 48 ಸನ್ನದುಗಳ ಸ್ಥಳಾಂತರ ಅನಿವಾರ್ಯವಾಗಿದೆ. ಈ 122 ಸನ್ನದುಗಳ ಪೈಕಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವವರು ಸಿ.ಎಲ್.7 ಪರವಾನಗಿದಾರರಾಗಿದ್ದಾರೆ.

ಸಿ.ಎಲ್.9 (ವೈನ್ ಸ್ಟೋರ್) ಸಿ.ಎಲ್.9 (ಬಾರ್)ಗಳಿಗೆ ಸ್ಥಳಾಂತರ ಮಾಡಿಕೊಂಡಲ್ಲಿ ಶುಲ್ಕ ಪಾವತಿಸಿ ನವೀಕರಣ ಮಾಡಿಸಿಕೊಳ್ಳಬಹುದು. ಆದರೆ ಸಿ.ಎಲ್.7 (ವಸತಿಗೃಹ) ಹೊಂದಿರುವಂತಹ ಪರವಾನಗಿಯಾಗಿದ್ದು, ಶಾಶ್ವತ ವ್ಯವಸ್ಥೆಗೆ ಅಪಾರ ವ್ಯಯ ಮಾಡಿರುವ ಇವರು ಈ ಕಟ್ಟಡ ಬಿಟ್ಟು ಬೇರೆಡೆಗೆ ಸ್ಥಳಾಂತರ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಇಂತಹ ಒಟ್ಟು 19 ಪರವಾನಗಿದಾರರಿದ್ದಾರೆ.

ಹೊಟೇಲ್ ನಡೆಸಲು ಅವಕಾಶ : ಬಾರ್ ಅಂಡ್ ರೆಸ್ಟೋರೆಂಟ್ ಪರವಾನಗಿ ಹೊಂದಿರುವವರಿಗೆ ಹೊಟೇಲ್ ನಡೆಸಲು ಅವಕಾಶವಿದೆಯಾದರೂ ಮದ್ಯ ಮಾರಾಟ ಮಾಡುವಂತಿಲ್ಲ. ಮದ್ಯ ಇಲ್ಲದಿದ್ದಲ್ಲಿ ಗ್ರಾಹಕರು ಕಡಿಮೆಯಾಗಲಿದ್ದಾರೆ ಎಂಬದು ಇವರ ಸಮಸ್ಯೆಯಾಗಿದೆ.

ಮಡಿಕೇರಿ ನಗರ ಸಭೆಗೆ ಡಿನೋಟಿಫಿಕೇಶನ್ ಇದ್ದರೂ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿರುವ ಜನರಲ್ ತಿಮ್ಮಯ್ಯ ವೃತ್ತದ ಸುತ್ತಮುತ್ತಲಿಗೆ ಸನ್ನದುಗಳಲ್ಲಿ ಮದ್ಯ ವಹಿವಾಟು ಸ್ಥಗಿತಗೊಂಡಿದೆ. ಮಡಿಕೇರಿಯಲ್ಲಿ ಪ್ರತಿಷ್ಠಿತ ಹೊಟೇಲ್‍ಗಳಾಗಿ ಹಿಂದಿನಿಂದಲೇ ಹೆಸರು ಹೊಂದಿದ್ದ ಈಸ್ಟ್ ಎಂಡ್, ಕ್ರಿಸ್ಟಲ್ ಕೋರ್ಟ್, ಚರ್ಚ್ ಸೈಡ್, ರೆಡ್‍ಫರ್ನ್ ಸೇರಿದಂತೆ 9 ಸ್ಥಳಗಳಲ್ಲಿ ಮದ್ಯ ಮಾರಾಟ ಇಂದಿನಿಂದ ಸ್ಥಗಿತವಾಗಿದೆ. ಇದಲ್ಲದೆ ಮೂರ್ನಾಡು, ಕಕ್ಕಬೆ ಕರಿಕೆಯಲ್ಲಿನ ಬಾಧಿತ ಮಳಿಗೆಗಳು ಮುಚ್ಚಲ್ಪಟ್ಟಿವೆ.

ದಕ್ಷಿಣ ಕೊಡಗಿನ ಕುಟ್ಟದಿಂದ ಗೋಣಿಕೊಪ್ಪದ ತನಕ ಒಂದೆರೆಡು ಮಳಿಗೆ ಹೊರತುಪಡಿಸಿ ಬಹುತೇಕ ಎಲ್ಲಾ ಸನ್ನದುಗಳು ಮುಚ್ಚಲ್ಪಟ್ಟಿವೆ.

ಸಿದ್ದಾಪುರ, ಅಮ್ಮತ್ತಿ, ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿನ ಮಳಿಗೆಗಳೂ ಬಂದ್ ಆಗಿವೆ.

ಸೋಮವಾರಪೇಟೆ ತಾಲೂಕಿನಲ್ಲಿ ಕೊಪ್ಪ ಗೇಟ್‍ನಿಂದ ಕುಶಾಲನಗರ, ಸುಂಟಿಕೊಪ್ಪ ತನಕ 15 ಸನ್ನದು, ಶನಿವಾರಸಂತೆ 5, ಗುಡುಗಳಲೆ 3, ಕೂಡಿಗೆ 3, ಶಿರಂಗಾಲ 2, ಹೆಬ್ಬಾಲೆ, ಕಣಿವೆ ವಿಭಾಗದಲ್ಲಿನ ಮಳಿಗೆಗಳು ಬಂದ್ ಆಗಿವೆ.

ಕೊಡಗು ಮದ್ಯ ಪ್ರಿಯರ ಜಿಲ್ಲೆಯಾಗಿದ್ದು, ಇಲ್ಲಿ ವ್ಯಾಪಾರ ಬಲು ಜೋರಾಗಿತ್ತು. ಮದ್ಯದಂಗಡಿ ಒತ್ತಿನ ಇತರ ವ್ಯಾಪಾರೋದ್ಯಮಕ್ಕೂ ಇದು ಅನುಕೂಲವಾಗಿತ್ತು. ಇದೀಗ ದಿಢೀರನೆ ಬಾಧಿತ ಮಳಿಗೆಗಳು ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಪರದಾಡುತ್ತಿದ್ದಾರೆ. ಮುಚ್ಚಿದ ಬಾಗಿಲನ್ನು ಹಲವಾರು ಮಂದಿ ಆಗಾಗ್ಗೆ ಬಂದು ವೀಕ್ಷಿಸಿ ತೆರಳುತ್ತಿದ್ದ ಸನ್ನಿವೇಶವನ್ನು ಪ್ರತ್ಯಕ್ಷದರ್ಶಿಗಳು ಚರ್ಚಿಸುತ್ತಿದ್ದರು. ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಚುನಾವಣೆ ಸಂದರ್ಭ ಮದ್ಯ ಮಾರಾಟ ನಿಷೇಧವಿರುವಾಗ ಇರುವಂತೆ ಬಂದ್ ರೀತಿಯ ಚಿತ್ರಣ ಕಂಡು ಬರುತ್ತಿದೆ ಎಂಬದು ನೋಡುಗರ ಅಭಿಪ್ರಾಯ.

-ಶಶಿ ಸೋಮಯ್ಯ