ಸುಂಟಿಕೊಪ್ಪ, ಜು. 1: ಕಂಬಿಬಾಣೆ ಗ್ರಾಮ ಪಂಚಾಯಿತಿಯಲ್ಲಿ 1-4-2016 ರಿಂದ 31-3-2017 ರವರೆಗೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷದ 24 ಸಾವಿರ 518 ರೂ.ಗಳ ಕಾಮಗಾರಿ ನಡೆಸಲಾಗಿದೆ ಎಂದು ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಸಂಯೋಜನಾಧಿಕಾರಿ ದಿನೇಶ್ ಹೇಳಿದರು. ಕಂಬಿಬಾಣೆ ಗ್ರಾ.ಪಂ.ಯಲ್ಲಿ ಮಹಾತ್ಮಾಗಾಂಧಿ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆಯ 2017-18ನೇ ಸಾಲಿನ ಮೊದಲ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಿತು.

ಉದ್ಯೋಗ ಖಾತ್ರಿ ಯೋಜನೆಯಡಿ 36 ಕಾಮಗಾರಿ ಯನ್ನು ನಡೆಸಲಾಗಿದ್ದು, ಹಲವು ಕಾಮಗಾರಿ ಪೂರ್ಣಗೊಂಡಿದೆ. ಇನ್ನಷ್ಟು ಪ್ರಗತಿಯಲ್ಲಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಿರ್ಮಿಸಿದ ಕಾರ್ಡ್‍ದಾರರಾದ ಫಲಾನುಭವಿಗಳಿಗೆ ಹಣ ಸಿಗದಿದ್ದಲ್ಲಿ ಸಭೆಗೆ ಮಾಹಿತಿ ನೀಡಬೇಕು. ಕಾಮಗಾರಿ ನಡೆದ ಜಾಗದಲ್ಲಿ ಕೆಲಸ ಆಗದಿದ್ದಲ್ಲಿ ಗ್ರಾಮಸ್ಥರು ಈ ಸಭೆಯಲ್ಲಿ ಪ್ರಶ್ನಿಸಬಹುದೆಂದೂ ಸಂಯೋಜ ನಾಧಿಕಾರಿ ದಿನೇಶ್ ಹೇಳಿದರು.

ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ಧಿ ವಸತಿ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೆ ಕೂಲಿ ಕೆಲಸ ಮಾಡಿದ ಬಿಲ್ ಪಾವತಿಸಲಾಗಿದೆ. ಸ್ಮಶಾನ ಅಭಿವೃದ್ಧಿ ಕಾಮಗಾರಿ 2,94,647 ಪಾವತಿಸಲಾಗಿದೆ. ಶಾಲೆಯಲ್ಲಿ ಹಾಗೂ ಇತರೆಡೆ ಗಿಡ ನೆಟ್ಟಿದ್ದು 17,024 ರೂ ವೆಚ್ಚವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಗಿಡಗಳು ನಿರ್ವಹಣೆ ಇಲ್ಲದೆ ಸತ್ತು ಹೋಗಿದೆ. ಆಶ್ರಯ ಮನೆ ಯೋಜನೆಯಡಿ ಅರ್ಜಿ ನೀಡಿದ್ದರೂ ಸಹಾಯ ಧನ ಲಭ್ಯವಾಗಿಲ್ಲ. ಮಳೆಗಾಲದಲ್ಲಿ ಮನೆ ಬೀಳುವ ಸ್ಥಿತಿಯಲ್ಲಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಸಾಮಾಜಿಕ ಪರಿಶೋಧನಾ ಇಲಾಖೆ ಬೆಂಗಳೂರಿನ ನಿರ್ದೇಶಕ ನರ್ಸಾರೆಡ್ಡಿ ವಾರಂಗಲ್, ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ಸಂಯೋಜಕ ಪ್ರೀತಂ ಪೊನ್ನಪ್ಪ, ಗ್ರಾ.ಪಂ. ಸದಸ್ಯರುಗಳಾದ ಆನಂದ ಆಸ್ಪಾ, ಮನು, ಮಂಜುಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಸ್ಮಾ, ನೋಡಲ್ ಅಧಿಕಾರಿ ಸುಂಟಿಕೊಪ್ಪ ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಆನಂದ್ ಹಾಜರಿದ್ದರು.