ಮಡಿಕೇರಿ, ಜು. 1: ಕೆಲವು ದಿನಗಳ ಹಿಂದೆ ಸುಂಟಿಕೊಪ್ಪದ ಬಾರೊಂದರಲ್ಲಿ ಕುಡಿದ ಅಮಲಿನಲ್ಲಿ ಸ್ನೇಹಿತರೊಂದಿಗೆ ಜಗಳವಾಡುತ್ತಿದ್ದಾಗ ಅಪರಿಚಿತನೊಬ್ಬ ಕರೆದೊಯ್ದ ಬೆನ್ನಲ್ಲೇ ನಿಗೂಢ ರೀತಿ ಕಾಣೆ ಯಾಗುವದರೊಂದಿಗೆ 12 ದಿನಗಳ ಬಳಿಕ ಮಕ್ಕಂದೂರು ಗ್ರಾಮದ ಕೆಸರು ಹೊಂಡದಲ್ಲಿ ಹೆಣವಾಗಿ ಗೋಚರಿಸಿದ್ದ ವ್ಯಕ್ತಿಯ ಭಯಾನಕ ಕೊಲೆ ರಹಸ್ಯ ಕಗ್ಗಂಟಾಗಿ ಪರಿಣಮಿಸಿದೆ.

ಕಳೆದ ಜೂನ್ 13ರಂದು ಸುಂಟಿಕೊಪ್ಪದ ಮಧುರಮ್ಮ ಬಡಾವಣೆಯ ನಿವಾಸಿ ಟಿ. ರಾಜ (37) ಎಂಬಾತ ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬಾರ್‍ವೊಂದರ ಎದುರು ತನ್ನ ಬೈಕ್‍ನಲ್ಲಿ (ಕೆಎ12-8061) ಬಂದು ಬೈಕ್ ನಿಲ್ಲಿಸಿ ಮದ್ಯ ಸೇವನೆಗಾಗಿ ಬಾರ್‍ನೊಳಗೆ ತೆರಳಿದ್ದಾನೆ.

ಈ ವೇಳೆ ಕುಡಿದ ಅಮಲಿನಲ್ಲಿ ರಾಜನೊಂದಿಗೆ ಆತನ ಸ್ನೇಹಿತ ಕುಮಾರ್ ಎಂಬಾತ ಕಲಹ ನಡೆಸಿದ್ದು, ಶಿವಾ ಎಂಬಾತ ಮಧ್ಯ ಪ್ರವೇಶಿಸಿ ಸಮಾಧಾನಗೊಳಿಸು ತ್ತಿದ್ದಾಗ ಅಲ್ಲಿಂದ ಅಪರಿಚಿತನೊಬ್ಬ ರಾಜನನ್ನು ಕರೆದೊಯ್ದಿದ್ದಾಗಿ ಹೇಳಲಾಗಿತ್ತು.

ತಾ. 13ರ ರಾತ್ರಿಯಿಂದ ರಾಜ ಕಾಣೆಯಾಗಿದ್ದು, ಈ ಕುರಿತು ಆತನ ಪತ್ನಿ ಟಿ.ಆರ್. ಮಣಿ ಎಂಬಾಕೆ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದಳು. ತಾನು ತಾ. 13ರಂದು ರಾತ್ರಿ 8 ಗಂಟೆ ವೇಳೆ ಗಂಡನ ಮೊಬೈಲ್‍ಗೆ ಕರೆ ಮಾಡಿ ಬೇಗನೆ ಮನೆಗೆ ಬರುವಂತೆ ತಿಳಿಸಿದ್ದಾಗಿಯೂ, ಆನಂತರದಲ್ಲಿ ಪತಿ ರಾಜ ಮೊಬೈಲ್ ಸಂಪರ್ಕಕ್ಕೆ ಲಭಿಸಿದೆ. ಕಣ್ಮರೆ ಯಾಗಿರುವದಾಗಿ ಹೇಳಿಕೊಂಡಿದ್ದಳು.

ತಾ. 24ರಂದು ‘ಶಕ್ತಿ’ ಮಾಹಿತಿ ಪ್ರಕಟಸಿ ಸುಂಟಿಕೊಪ್ಪ ಬಾರ್‍ನಲ್ಲಿ ಕಲಹದ ಬಳಿಕ ಕಾಣೆಯಾದ ವ್ಯಕ್ತಿ ಹಲವು ದಿನಗಳ ಬಳಿಕವೂ ಪತ್ತೆಯಾಗದ ಬಗ್ಗೆ ಗಮನ ಸೆಳೆದಿತ್ತು.

ಈ ನಡುವೆ ಆ ದಿನ ಸಂಜೆಗತ್ತಲೆ ನಡುವೆ ಮಕ್ಕಂದೂರು ಗ್ರಾಮದ ನಿವಾಸಿ ಕೆ.ಎಂ. ಬೋಪಣ್ಣ ಎಂಬವರ ತೋಟದಲ್ಲಿರುವ ಕೃಷಿ ಹೊಂಡದಲ್ಲಿ ಅಪರಿಚಿತ ಶವ ಗೋಚರಿಸಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ಲಭಿಸಿತ್ತು.

ಅಲ್ಲಿನ ತೋಟದ ಕಾರ್ಮಿಕರ ನೊಬ್ಬ ಕೃಷಿ ಹೊಂಡದಲ್ಲಿ ಮನುಷ್ಯನ ಕಾಲು ಕಂಡ ಬಗ್ಗೆ ತೋಟದ ವ್ಯವಸ್ಥಾಪಕರಿಗೆ ವಿಷಯ ಮುಟ್ಟಿಸಿದ ಮೇರೆಗೆ ಪೊಲೀಸರಿಗೆ ಈ ಸುದ್ದಿ ರವಾನೆಯಾಗಿತ್ತು. ಸ್ಥಳಕ್ಕೆ ಧಾವಿಸಿದ್ದ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಹಾಗೂ ಸಿಬ್ಬಂದಿ ಸ್ಥಳ ಮಹಜರು ನಡೆಸಿ ಇದೊಂದು ಕೊಲೆಯೆಂದು ಖಾತರಿ ಬಳಿಕ ಶವವನ್ನು ಸ್ವಾಧೀನಕ್ಕೆ ಪಡೆದಿದ್ದರು.

ಈ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ ಸುಂಟಿಕೊಪ್ಪ ಪೊಲೀಸ್ ತಂಡ ಕೆಲ ದಿನಗಳ ಹಿಂದೆ ಕಾಣೆ ಯಾಗಿದ್ದ ರಾಜನ ಹುಡುಕಾಟದ ನಡುವೆ ಆತನ ಪತ್ನಿಯಿಂದ ಮಾಹಿತಿ ಕಲೆ ಹಾಕಿ ವಿಚಾರ ತಿಳಿಸಲು ಮೃತನ ಕೈಯಲ್ಲಿದ್ದ ಹಚ್ಚೆಯಿಂದ ಗುರುತು ಹಿಡಿದು ಅದು ನನ್ನ ಗಂಡನ ಶವವೆಂದು ಆಕೆ ಖಚಿತಪಡಿಸಿದ್ದಳು.

ಹೀಗಾಗಿ ಮಡಿಕೇರಿ ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣವನ್ನು ಸುಂಟಿಕೊಪ್ಪ ಠಾಣೆಗೆ ವರ್ಗಾಯಿಸಿದ್ದರು.