ವೀರಾಜಪೇಟೆ, ಜು. 1: ವೀರಾಜಪೇಟೆ ಬಳಿಯ ಕೆದಮುಳ್ಳೂರು, ಬೂದಿಮಾಳ, ತೋರ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಒಂಟಿಸಲಗ ಹಾಡಹಗಲೇ ಸಂಚರಿಸುತ್ತಿದ್ದು ಗ್ರಾಮಸ್ಥರು, ಶಾಲಾ ಮಕ್ಕಳು ಭಯದ ವಾತಾವರಣದಲ್ಲಿ ಸಂಚರಿಸುವಂತಾಗಿದೆ ಎಂದು ಕೆದಮುಳ್ಳೂರು, ತೋರ ಗ್ರಾಮಸ್ಥರು ಇಂದು ವಿಭಾಗ ಅರಣ್ಯ ಕಚೇರಿಗೆ ದೂರು ನೀಡಿದ್ದಾರೆ.

ಸುಮಾರು ಏಳು ದಿನಗಳಿಂದ ನಾಗರಹೊಳೆಯ ಅಭಯಾರಣ್ಯದಿಂದ ಕೆದಮುಳ್ಳೂರು ಗ್ರಾಮದ ಕಡೆ ಬಂದಿರುವ ಕಾಡಾನೆಗಳ ತಂಡ ಕಾಫಿ ತೋಟದಲ್ಲಿ ಶಿಬಿರ ಹೂಡಿದ್ದು ಮರಿ ಆನೆಯೊಂದಿಗಿರುವ ತಂಡದಿಂದ ಒಂಟಿಸಲಗ ಬೇರೆ ಬಂದಿದ್ದು ಸುತ್ತಮುತ್ತಲ ಗ್ರಾಮಗಳ ನಡುವೆ ರಾತ್ರಿ-ಹಗಲೆನ್ನದೆ ರಾಜಾರೋಷವಾಗಿ ಸಂಚರಿಸಿ ಭಯದ ವಾತಾವರಣ ನಿರ್ಮಿಸಿದೆ ಎಂದರು.

ಇಂದು ಬೆಳಿಗ್ಗೆ ಎಂಟು ಗಂಟೆ ಸಮಯದಲ್ಲಿ ಒಂಟಿಸಲಗ ಗ್ರಾಮಸ್ಥರಿಗೆ ಕಾಣಿಸಿಕೊಂಡಿದೆ. ಒಂಟಿಸಲಗದಿಂದ ಹೆದರಿ ಶಾಲೆಗೂ ಕೆಲವು ಮಕ್ಕಳು ಹೋಗದೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಕಾಡಾನೆ ಮರಿಯೊಂದಿಗಿರುವ ತಂಡ ಗ್ರಾಮದ ಸುತ್ತಮುತ್ತಲ ತೋಟಗಳಿಗೆ ನುಗ್ಗಿ ಕಾಫಿ ಗಿಡಗಳನ್ನು, ಬಾಳೆ, ತೆಂಗಿನ ಗಿಡಗಳನ್ನು ನಾಶಪಡಿಸಿರುವದರಿಂದ ಗ್ರಾಮಸ್ಥರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವದಾಗಿ ತೋರ ಗ್ರಾಮದ ಕೀತಿಯಂಡ ಪ್ರತ್ಯುಮ್ನ, ಕುಡಿಯರ ಅಪ್ಪಚ್ಚು, ಚಂಗಪ್ಪ, ದೇಚಮ್ಮ, ಹಾಗೂ ಶೇಖರ್ ಗ್ರಾಮಸ್ಥರ ಪರವಾಗಿ ದೂರು ಸಲ್ಲಿಸಿದ್ದಾರೆ.

ಗ್ರಾಮಸ್ಥರ ದೂರಿನ ಮೇರೆ ಅರಣ್ಯ ಸಿಬ್ಬಂದಿಗಳು ಕಾಫಿ ತೋಟದಿಂದ ಕಾಡಾನೆಗಳನ್ನು ಕಾಡಿಗೆ ಓಡಿಸುವ ನಾಟಕೀಯ ಕಾರ್ಯಾಚರಣೆ ಮಾಡಿದರೂ ಕಾಡಾನೆಗಳ ತಂಡ ಮರು ಕ್ಷಣದಲ್ಲಿಯೇ ಮತ್ತೊಂದು ತೋಟದಲ್ಲಿ ಶಿಬಿರ ಹೂಡಿರುತ್ತದೆ ಎಂದು ಗ್ರಾಮಸ್ಥರು ಮಾಧ್ಯಮದವರೊಂದಿಗೆ ದೂರಿದ್ದಾರೆ.

ಮಲೆತಿರಿಕೆ ಬೆಟ್ಟದಲ್ಲಿ

ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ಸುಮಾರು 7 ಕಾಡಾನೆಗಳ ತಂಡ ಸಂಚರಿಸುತ್ತಿದ್ದು, ಬೆಟ್ಟದ ನಿವಾಸಿಗಳು ಭಯಭೀತರಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಚೆಂಬೆಬೆಳ್ಳೂರು ಗ್ರಾಮದ ಅರಣ್ಯದಿಂದ ಬಂದಿರುವ ಕಾಡಾನೆಗಳ ತಂಡ ಬೆಟ್ಟದ ತುದಿಯಲ್ಲಿಯೇ ಶಿಬಿರ ಹೂಡಿ ಬೆಟ್ಟದ ಸುತ್ತಲೂ ಸಂಚರಿಸುತ್ತಿರುವದಾಗಿ ಬೆಟ್ಟದ ನಿವಾಸಿಗಳು ಇಲ್ಲಿನ ವಿಭಾಗಿಯ ಅರಣ್ಯ ಕಚೇರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.