ಮಡಿಕೇರಿ, ಜು. 1: ನಗರಸಭಾ ಸದಸ್ಯರಾಗಿರುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಅವರನ್ನು ಪಕ್ಷದಿಂದ ಅಮಾನತು ಗೊಳಿಸಿದರೆ ಕಾಂಗ್ರೆಸ್ ಪಕ್ಷದ ಬಲ ಮತ್ತಷ್ಟು ಹೆಚ್ಚಲಿದೆ ಎಂದು ಕಾಂಗ್ರೆಸ್‍ನ ಹಿರಿಯ ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಕೆ.ಎಂ. ಗಣೇಶ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ್ದಾರೆ.

ಮಡಿಕೇರಿ ನಗರಸಭೆಯಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನಗರದ ಜನತೆಗೆ ಪಾರದರ್ಶಕ ಆಡಳಿತ ನೀಡುತ್ತಿದೆ. ಆದರೆ ಗಣೇಶ್ ಅವರು ನಗರಸಭೆಯ ವಿರುದ್ಧ ಇಲಿ, ಚೇಳುಗಳು ಸೇರಿಕೊಂಡಿವೆ ಎಂದು ಟೀಕಿಸಿರುವದು ಖಂಡನೀಯ. ತಿಮಿಂಗಿಲಗಳ ಜೊತೆ ಸೇರಿ ಅವರು ಯಾವ ರೀತಿ ನಗರಸಭೆಯಲ್ಲಿ ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವದು ನಗರದ ಜನತೆಗೆ ತಿಳಿದಿದೆ ಎಂದು ನಂದಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವ್ಯಕ್ತಿಗಳು ಕಾಂಗ್ರೆಸ್ ಪಕ್ಷದಿಂದ ಹೊರಕ್ಕೆ ಹೋದರೆ ಪಕ್ಷ ಸ್ವಚ್ಛವಾಗಲಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಶತ್ರುವನ್ನು ಮುಖಂಡರು ಪಕ್ಷದಿಂದ ಉಚ್ಛಾಟನೆ ಮಾಡಿದರೆ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ನಂದಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಇಂತಹ ಬೆದರಿಕೆಗೆ ಮಣಿಯುವದಿಲ್ಲವೆಂದು ತಿಳಿಸಿರುವ ಅವರು, ಪಕ್ಷ ವಿರೋಧಿ ಚಟುವಟಿಕೆ ಮತ್ತು ಒಳ ಒಪ್ಪಂದದ ಕುರಿತು ಸಾಕ್ಷಿ ಸಹಿತ ಬಹಿರಂಗಪಡಿಸುವದಾಗಿ ಹೇಳಿದ್ದಾರೆ.