ಸೋಮವಾರಪೇಟೆ, ಜು. 1: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರು ಆಯ್ಕೆಯಾಗಿದ್ದ ಸೋಮವಾರಪೇಟೆ ಕ್ಷೇತ್ರದ ತಾಲೂಕು ಮಟ್ಟದ ಸರ್ಕಾರಿ ಬಸ್ ನಿಲ್ದಾಣದ ಆವರಣ ಹಲವು ದಶಕಗಳ ನಂತರ ದುರಸ್ತಿ ಭಾಗ್ಯ ಕಂಡಿದ್ದು, ಹೈಟೆಕ್ ಆಗಿ ರೂಪುಗೊಳ್ಳುತ್ತಿದೆ.

ಅನೇಕ ದಶಕಗಳ ಕಾಲ ಹೊಂಡಾಗುಂಡಿಗಳ ನಡುವೆಯೇ ಮುಳುಗಿಹೋಗಿದ್ದ ಬಸ್ ನಿಲ್ದಾಣ ಇದೀಗ ಕಾಂಕ್ರೀಟ್ ಆವರಣದೊಂದಿಗೆ ಮಿಂಚುತ್ತಿದ್ದು, ನಿಲ್ದಾಣದ ಛಾವಣಿಯ ಸುತ್ತ ‘ಗ್ಲಾಸ್’ಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಮಳೆಗಾಲದಲ್ಲಂತೂ ನಿಲ್ದಾಣದಲ್ಲಿ ನಿರ್ಮಾಣವಾಗಿದ್ದ ಗುಂಡಿಗಳಲ್ಲಿ ನೀರು ನಿಂತು ಪ್ರಯಾಣಿಕರಿಗೆ ನಡೆದಾಡಲೂ ಕಷ್ಟಕರವಾಗಿ ಪರಿಣಮಿಸಿತ್ತು. ಕೆಲವೊಮ್ಮೆ ಕೆಸರಿನ ಸಿಂಚನವಾಗುತ್ತಿದ್ದ ಸಂದರ್ಭ ಕೆಎಸ್‍ಆರ್‍ಟಿಸಿ ಸಂಸ್ಥೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದರು.

ಇಲ್ಲಿಯವರೆಗೂ ಕಪ್ಪುಚುಕ್ಕೆಯಂತಿದ್ದ ಬಸ್ ನಿಲ್ದಾಣದ ಆವರಣ, ಇದೀಗ ಕಾಂಕ್ರಿಟೀಕರಣಗೊಂಡಿದ್ದು, ಈ ಭಾಗದ ಜನತೆಯಲ್ಲಿ ಸಮಾಧಾನದ ಭಾವ ಮೂಡಿಸಿದೆ. ಪ್ರಸ್ತುತ ಪುತ್ತೂರು ವಿಭಾಗಕ್ಕೆ ಸೇರಿರುವ ಇಲ್ಲಿನ ಸರ್ಕಾರಿ ಬಸ್ ನಿಲ್ದಾಣ ದಿ. ಆರ್. ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಿರ್ಮಾಣಗೊಂಡಿತ್ತು. ನಂತರದ ದಿನಗಳಲ್ಲಿ ಹಂತ ಹಂತವಾಗಿ ಮೇಲ್ದರ್ಜೆಗೇರಿ ಕಳೆದ 5 ವರ್ಷಗಳ ಹಿಂದೆ ರೂ. 27 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣ ಕಟ್ಟಡ ನಿರ್ಮಾಣವಾಗಿದೆ.

ಇದೂ ಸಹ ಅವೈಜ್ಞಾನಿಕವಾಗಿ ನಿರ್ಮಾಣವಾದ್ದರಿಂದ ಹಿಂದಿನ ಅವ್ಯವಸ್ಥೆಗಳೇ ಮುಂದುವರೆದಿತ್ತು. ಈ ಹಿಂದಿನ ಬಿಜೆಪಿ ಸರ್ಕಾರವಿದ್ದ ಸಂದರ್ಭ ಸೋಮವಾರಪೇಟೆಗೆ ಭೇಟಿ ನೀಡಿದ್ದ ಅಂದಿನ ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ್, ಈ ಬಸ್ ನಿಲ್ದಾಣದ ಅವ್ಯವಸ್ಥೆ ಗಮನಿಸಿ, ಅಗತ್ಯ ಸೌಲಭ್ಯ ಕಲ್ಪಿಸಲೆಂದು ರೂ. 1.02 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು.

ಈ ಅನುದಾನದಲ್ಲಿ ಈಗಿರುವ ಕಟ್ಟಡ ನವೀಕರಣಕ್ಕೆ ರೂ. 44.30 ಲಕ್ಷ, ಬಸ್ ನಿಲ್ದಾಣದ ಆವರಣ ಕಾಂಕ್ರಿಟೀಕರಣಕ್ಕೆ ರೂ. 16.12 ಲಕ್ಷ, ಸುತ್ತಲೂ ಆವರಣಗೋಡೆ ನಿರ್ಮಾಣಕ್ಕೆ ರೂ. 12.70ಲಕ್ಷ, ಶೌಚಾಲಯ ದುರಸ್ತಿಗೆ ರೂ. 21.88 ಲಕ್ಷ ಹಾಗೂ ವಿದ್ಯುತ್ ಸೌಕರ್ಯ ಅಳವಡಿಸಲು ರೂ. 5 ಲಕ್ಷ ವಿನಿಯೋಗಿಸಲು ನಕ್ಷೆ ತಯಾರಾಗಿತ್ತು. ನಕ್ಷೆಯ ಪ್ರಕಾರ ರೂ. 1 ಕೋಟಿ ಬೇಕಾಗಿದ್ದು ಸರ್ಕಾರ ಹೆಚ್ಚುವರಿಯಾಗಿ ರೂ. 2 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ಮೈಸೂರಿನ ಗುತ್ತಿಗೆದಾರರೋರ್ವರು ಕಾಮಗಾರಿಯನ್ನು ನಿರ್ವಹಿಸುತ್ತಿದ್ದರು.

ಬಸ್ ನಿಲ್ದಾಣದ ಒಳಭಾಗಕ್ಕೆ ಟೈಲ್ಸ್, ಛಾವಣಿ ನಿರ್ಮಾಣ, ಕೆಲವು ಭಾಗಗಳಲ್ಲಿ ಮಾತ್ರ ಆವರಣ ಗೋಡೆ, ಎರಡು ವಾಣಿಜ್ಯ ಮಳಿಗೆ ನಿರ್ಮಾಣ ಕಾರ್ಯ ಕೈಗೊಂಡಿರುವದನ್ನು ಹೊರತುಪಡಿಸಿದರೆ ಉಳಿದಂತೆ ಯಾವದೇ ಕಾಮಗಾರಿಯನ್ನೂ ಗುತ್ತಿಗೆದಾರ ಕೈಗೊಂಡಿರಲಿಲ್ಲ. ಕಳೆದ 5 ವರ್ಷಗಳಿಂದಲೂ ಆಮೆ ವೇಗದಲ್ಲಿ ನಡೆಯುತ್ತಿದ್ದ ಬಸ್ ನಿಲ್ದಾಣ ಕಾಮಗಾರಿ ಕೆಲ ತಿಂಗಳ ಹಿಂದೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಉದ್ದೇಶಿತ ಯೋಜನೆಯಂತೆ ಕಾಮಗಾರಿ ಕೈಗೊಳ್ಳದ ಹಿನ್ನೆಲೆ ಸರ್ಕಾರಿ ಬಸ್ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿ ಮಾರ್ಪಟ್ಟಿತು. ಮಳೆಗಾಲದಲ್ಲಂತೂ ಈ ನಿಲ್ದಾಣದಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿ ಸಣ್ಣಪುಟ್ಟ ಕೆರೆಗಳ ಸಮೂಹದಂತೆ ಕಂಡುಬರುತಿತ್ತು. ಎರಡು ದಶಕಗಳ ಹಿಂದೆ ಹಾಕಲಾಗಿದ್ದ ಡಾಂಬರು ಕಿತ್ತುಬಂದು ಮಳೆಗಾಲದಲ್ಲಿ ನೀರಿನ ಸಂಗ್ರಹವಾಗುತ್ತಿದ್ದರೆ, ಬೇಸಿಗೆಯಲ್ಲಿ ಧೂಳಿನ ಆಗರವಾಗಿ ಪ್ರಯಾಣಿಕರಿಗೆ ಕಿರಿಕಿರಿಯುಂಟುಮಾಡುತ್ತಿತ್ತು.

ಹೊಂಡಾಗುಂಡಿಗಳ ಬಸ್ ನಿಲ್ದಾಣದ ಎದುರುಭಾಗದಲ್ಲೇ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕಚೇರಿಯೂ ಇದ್ದು, ಅವ್ಯವಸ್ಥೆಯ ನಿಲ್ದಾಣ ಶಾಸಕರಿಗೆ ಮಾತ್ರವಲ್ಲ ಇಡೀ ಸೋಮವಾರಪೇಟೆ ಪಟ್ಟಣಕ್ಕೆ ಕಪ್ಪುಚುಕ್ಕೆಯಾಗಿ ಪರಿಗಣಿಸಲ್ಪಟ್ಟಿತ್ತು. ಈ ಬಗ್ಗೆ ಹಲವಷ್ಟು ಬಾರಿ ಸಂಘ-ಸಂಸ್ಥೆಗಳು, ಮಾಧ್ಯಮಗಳು ಶಾಸಕರು ಹಾಗೂ ಸರ್ಕಾರದ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ.

ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ರೂ. 74 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಬಸ್ ನಿಲ್ದಾಣದ ಆವರಣ ಕಾಂಕ್ರಿಟೀಕರಣ, ಶೌಚಾಲಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಶಾಸಕ ಅಪ್ಪಚ್ಚು ರಂಜನ್ ಅವರು ಕಾಮಗಾರಿಗೆ ಚಾಲನೆ ನೀಡಿದ ನಂತರವೂ ಸಹ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ.

ಇದೀಗ ಬಸ್ ನಿಲ್ದಾಣದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಒಂದು ವಾರದ ಒಳಗೆ ಬಸ್ ನಿಲ್ದಾಣದ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಅಭಿಯಂತರ ಕಿರಣ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಇನ್ನು ಛಾವಣಿಯ ಸುತ್ತಲೂ ‘ಗ್ಲಾಸ್’, ಇಂಟರ್‍ಲಾಕ್, ಎಸಿಪಿ ಬೋರ್ಡ್, ಶೌಚಾಲಯ ದುರಸ್ತಿ ಕಾರ್ಯಗಳು ಮಾತ್ರ ಬಾಕಿಯಿದ್ದು, ಮುಂದಿನ ಒಂದು ವಾರದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಿರಣ್ ಮಾಹಿತಿ ನೀಡಿದ್ದಾರೆ.

- ವಿಜಯ್ ಹಾನಗಲ್