ಮಡಿಕೇರಿ, ಜು. 1: ಮಹಾತ್ಮಾ ಗಾಂಧೀಜಿಯವರ ಕನಸಿನಂತೆ ಭಾರತವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸ್ವಚ್ಛ ಭಾರತ್ ಮಿಷನ್ ಜಾರಿಗೆ ತಂದಿದೆ. ಬಹುತೇಕ ಎಲ್ಲರಲ್ಲೂ ಇದೀಗ ಸ್ವಚ್ಛತೆಯ ಬಗ್ಗೆ ಅರಿವು ಮಾಡಿದೆ. ಮಡಿಕೇರಿಯಲ್ಲೂ ಕೂಡ ಸ್ವಚ್ಛತೆಗೆ ನಗರಸಭೆ ಕ್ರಮ ಕೈಗೊಂಡಿದ್ದು, ಕಸದ ತೊಟ್ಟಿಗಳನ್ನು ಮುಕ್ತಗೊಳಿಸಿ ಮನೆ ಬಾಗಿಲಿಗೆ ಕಸ ವಿಲೇವಾರಿ ವಾಹನಗಳ ವ್ಯವಸ್ಥೆ ಮಾಡಿದೆ. ಆದರೂ ಪ್ರಜ್ಞಾವಂತರಾದ ನಮ್ಮಲ್ಲಿ ಇನ್ನೂ ಕೂಡ ಅರಿವು ಮೂಡದಿರು ವದು ವಿಷಾದನೀಯ. ಪ್ರತಿದಿನ ವಾಹನಗಳು ಬಂದರೂ ಅದರಲ್ಲಿ ಕಸ ಹಾಕದೆ ರಸ್ತೆ ಬದಿ ಎಲ್ಲೆಂದರಲ್ಲಿ ಸುರಿಯುತ್ತಿರುವದು ಸಾಮಾನ್ಯವಾಗಿದೆ. ಕೆಲವು ಹೊಟೇಲ್, ಅಂಗಡಿಗಳೂ ಇದಕ್ಕೆ ಹೊರತಾಗಿಲ್ಲ.

ಇಲ್ಲಿನ ಕನಕದಾಸ ರಸ್ತೆಯಲ್ಲಿ ಪ್ರತಿನಿತ್ಯ ಬಾರ್ ಅಂಡ್ ರೆಸ್ಟೋರೆಂಟ್ ತ್ಯಾಜ್ಯಗಳನ್ನು ತಂದು ಸುರಿಯಲಾಗು ತ್ತಿದೆ. ಈ ಪ್ರದೇಶದಲ್ಲಿ ಯಾವದೇ ಬಾರ್, ಹೊಟೇಲ್ ಗಳಿಲ್ಲದಿದ್ದರೂ ಮದ್ಯದ ಶೀಷೆಗಳು, ತ್ಯಾಜ್ಯಗಳು ಮಾತ್ರ ರಾಶಿ, ರಾಶಿ ಬಿದ್ದಿರುತ್ತದೆ.

ವಾರ್ಡ್ ಸ್ವಚ್ಛವಾಗಿರಬೇಕೆಂಬ ಉದ್ದೇಶದಿಂದ ವಾರ್ಡ್‍ನ ಸದಸ್ಯ ಕೆ.ಜೆ. ಪೀಟರ್ ಪ್ರತಿನಿತ್ಯ ಭೇಟಿ ನೀಡಿ ಪರಿಶೀಲಿಸುತ್ತಾರೆ. ಆದರೂ ದಿನನಿತ್ಯ ಕನಕದಾಸ ರಸ್ತೆಯಿಂದ ಹಿಲ್‍ರಸ್ತೆಗೆ ತೆರಳುವ ರಸ್ತೆಯ ಮೂಲೆಯಲ್ಲಿ ಕಸದ ರಾಶಿ ಬಿದ್ದಿರುತ್ತದೆ. ‘ಇಲ್ಲಿ ಕಸ ಹಾಕಬೇಡಿ- ನಗರವನ್ನು ಸ್ವಚ್ಛವಾಗಿಡಿ’ ಎಂದು ಪೀಟರ್ ಅವರೇ ಫಲಕವನ್ನು ಕೂಡ ಅಳವಡಿಸಿದ್ದಾರೆ. ಆದರೂ ಕಸವನ್ನು ತಂದು ಸುರಿಯುತ್ತಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸು ತ್ತಾರೆ. ಕಸದ ರಾಶಿಯಲ್ಲಿ ಸಾರಿಗೆ ಸಂಸ್ಥೆ ಮುಂಭಾಗವಿರುವ ಬಾರೊಂದರ ಬಿಲ್‍ಗಳು ಕೂಡ ಇರುವದರಿಂದ ಅದೇ ಬಾರ್‍ನವರೇ ತಂದು ಸುರಿದಿರುವದು ತಿಳಿದುಬರು ತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಪೀಟರ್ ಮನವಿ ಮಾಡಿ ಕೊಂಡಿದ್ದಾರೆ. -ಸಂತೋಷ್.