ಕೂಡಿಗೆ, ಜು. 2: ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲಿ ಕಳೆದ ಮೂರು ತಿಂಗಳ ಹಿಂದೆಯೇ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಯು ಪೂರ್ಣಗೊಂಡಿದ್ದರೂ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಘಟಕದ ಕಾಮಗಾರಿ ನಡೆಯುವ ಸಂದರ್ಭ ಕೈಗೊಂಡ ತಾಲೂಕಿನ ಹಲವು ಕುಡಿಯುವ ನೀರಿನ ಘಟಕಗಳು ಉದ್ಘಾಟನೆಗೊಂಡು ಸ್ಥಳೀಯರಿಗೆ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುತ್ತಿವೆ. ಆದರೆ ಕೂಡಿಗೆಯ ಈ ಶುದ್ಧ ಕುಡಿಯುವ ನೀರಿನ ಘಟಕವು ವಿದ್ಯುತ್ ಅಳವಡಿಕೆಯ ನೆಪ ಹೇಳುತ್ತಾ ಎರಡು ತಿಂಗಳುಗಳೇ ಕಳೆದರೂ ಇದುವರೆಗೂ ಈ ಬಗ್ಗೆ ಯಾರೊಬ್ಬರೂ ಗಮನ ಹರಿಸದೇ ಇರುವದು ವಿಪರ್ಯಾಸವಾಗಿದೆ.

ಈ ಘಟಕಕ್ಕೆ ಸಂಬಂಧಪಟ್ಟ ಚೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಘಟಕಕ್ಕೆ ಬೇಕಾಗುವ ವಿದ್ಯುತ್ ಸರಬರಾಜಿಗೆ ಟ್ರಾನ್ಸ್‍ಫಾರಂ ಅಳವಡಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಕೂಡಿಗೆ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ಕೆ.ಜಿ ಮೋಹಿನಿ, ಕೆ.ಟಿ.ಈರಯ್ಯ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.