ವೀರಾಜಪೇಟೆ, ಜು. 3: ಕೆದಮುಳ್ಳೂರು, ತೋರ, ಪಾಲಂಗಾಲ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರ ಕಾಡಾನೆಗಳ ಹಾವಳಿಯಿಂದ ಜನ ಸಾಮಾನ್ಯರ ಜೀವನ ದುಸ್ತರವಾಗುತ್ತಿದೆ. 15 ದಿನಗಳಲ್ಲಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸದಿದ್ದರೆ ಅರಣ್ಯ ಕಚೇರಿಗೆ ಬೀಗ ಜಡಿದು ಮುಖ್ಯ ರಸ್ತೆ ತಡೆದು ಪ್ರತಿಭಟಿಸಲಾಗುವದು ಎಂದು ಆರೋಪಿಸಿ ಕೆದಮುಳ್ಳೂರು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗಡುವು ನೀಡಿದರು.ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ ಕೆದಮುಳ್ಳೂರು, ತೋರ, ಪಾಲಂಗಾಲ ಗ್ರಾಮಗಳಲ್ಲಿ ನಿರಂತರವಾಗಿ ಹಿಂಡು ಹಿಂಡಾಗಿ ಕಾಡನೆಗಳು ಗ್ರಾಮದ ತೋಟಗಳಿಗೆ ಧಾಳಿ ನಡೆಸುತ್ತಿವೆ. ಜನರು ಮನೆಯಿಂದ ಹೊರಗೆ ಬರಲು ಭಯಭೀತರಾಗಿದ್ದಾರೆ. ಹಗಲು ರಾತ್ರಿ ಎನ್ನದೆ ಕಾಡಾನೆಗಳು ವಿಪರೀತ ತೊಂದರೆ ನೀಡುತ್ತಿವೆ. ಕಳೆದ 2 ತಿಂಗಳಲ್ಲಿ ಇಬ್ಬರು ಕಾಡಾನೆ ಹಾವಳಿಗೆ ಬಲಿಯಾಗಿದ್ದಾರೆ. ಉಳಿದ ನಾಲ್ಕು ಜನರು ಗಂಭೀರ ಸ್ವರೂಪದಲ್ಲಿ ಗಾಯ ಗೊಂಡಿದ್ದಾರೆ. ಬೆಳಿಗ್ಗೆ ಮನೆಯಿಂದ ತೆರಳಿದವರು ಹಿಂತಿರುಗಿ ಮನೆಗೆ ಮರಳುವ ವಿಶ್ವಾಸ ಕಳೆದುಕೊಂಡಿ ದ್ದೇವೆ. ಕೂಡಲೇ ಆನೆಗಳನ್ನು ಕಾಡಿಗೆ ಅಟ್ಟುವದು ಅಥವ ಶಾಶ್ವತ ಪರಿಹಾರ ನೀಡದಿದ್ದಲ್ಲಿ ಕಚೇರಿಗೆ ಬೀಗ ಜಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಮನವಿಗೆ ಸ್ಪಂದಿಸಿದ ಉಪಸಂರಕ್ಷಣಾಧಿಕಾರಿ ಎ.ಜೆ ರೋಹಿಣಿ ಮಾತನಾಡಿ ಈಗಾಗಲೇ 2 ಬಾರಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಆ ಭಾಗದಲ್ಲಿ ಖಾಸಗಿ ಅವರ ನೂರಾರು ಎಕರೆ ಜಾಗವನ್ನು ಪಾಳು ಬೀಡಲಾಗಿದೆ. ಅದು ದಟ್ಟ ಅರಣ್ಯವಾಗಿದೆ. ಆನೆಗಳು ಆ ಕಾಡಿನಲ್ಲಿ ಸೇರಿಕೊಳ್ಳುತ್ತವೆÉ. ಈಗಾಗಲೇ 10 ಆನೆಗಳನ್ನು ಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸಕಾರದಿಂದ ಅನುಮತಿ ಸಿಕ್ಕಿದ ಕೂಡಲೆ ಆನೆಗಳನ್ನು ಹಿಡಿದು ಬೇರೆಡೆಗೆ ರವಾನೆ ಮಾಡಲಾಗುವದು. ಮನುಷ್ಯರಿಗೆ ತೊಂದರೆ ನೀಡುತ್ತಿರುವ ಆನೆಗಳನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸುವ ಕಾರ್ಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆಯುತ್ತಿದೆ. ಮುಂದಿನ ಅಕ್ಟೋಬರ್ ನಲ್ಲಿ ವೀರಾಜಪೇಟೆ ತಾಲೂಕಿ ನಲ್ಲಿಯೂ ನಡೆಸಲಾಗುವದು. ಯಾವ ಕಡೆಗಳಿಂದ ಆನೆಗಳು ನಾಡಿಗೆ ಬರುತ್ತಿವೆ ಎಂಬದನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ವ್ಯೆಜ್ಞಾನಿಕ ರೀತಿಯಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಮಾತಂಡ ಮೊಣ್ಣಪ್ಪ, ಕರಿನೆರವಂಡ ರಮೇಶ್, ನಡಿಕೇರಿಯಂಡ ಮಹೇಶ್ ಸೇರಿದಂತೆ 100ಕ್ಕೂ ಅಧಿಕ ಗ್ರಾಮಸ್ಥರು ಪಾಲ್ಗೊಂಡಿದ್ದರು.