ಸಿದ್ದಾಪುರ ಜು. 2: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗೂಡುಗದ್ದೆ ಗುಹ್ಯ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು ಕೂಡಲೇ ದುರಸ್ತಿಪಡಿಸುವಂತೆ ಗುಹ್ಯ ಗ್ರಾಮದ ಸಿ.ಪಿ.ಐ.(ಎಂ). ಪಕ್ಷದ ಮುಖಂಡ ಸಿ.ಎಂ. ಮುಸ್ತಾಫ ಒತ್ತಾಯಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಗೂಡುಗದ್ದೆ, ಗುಹ್ಯ ಗ್ರಾಮ ವ್ಯಾಪ್ತಿಯಿಂದ 8 ಮಂದಿ ಗ್ರಾಮ ಪಂಚಾಯಿತಿಯ ಸದಸ್ಯರುಗಳಿದ್ದು ಹಾಗೂ ಓರ್ವ ತಾಲೂಕು ಪಂಚಾಯಿತಿ ಸದಸ್ಯರಿದ್ದರೂ ಕೂಡ ರಸ್ತೆಯನ್ನು ದುರಸ್ತಿ ಪಡಿಸದೆ ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು. ಕಳೆದ ಮೂರು ವರ್ಷಗಳಿಂದಲೂ ಗೂಡುಗದ್ದೆ ಗುಹ್ಯ ರಸ್ತೆ ಹದಗೆÀಟ್ಟಿರುವ ಬಗ್ಗೆ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳ ಗಮನಕ್ಕೆ ತಂದಿದ್ದರೂ ಕೂಡ ಈ ಬಗ್ಗೆ ಜನಪ್ರತಿನಿಧಿಗಳು ಆಸಕ್ತಿ ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿದರು. ರಸ್ತೆಯು ಹೊಂಡ, ಗುಂಡಿಗಳಿಂದ ಕೂಡಿದ್ದು, ವಾಹನಗಳು ಕೂಡ ಸಂಚರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಈ ಸಮಸ್ಯೆಗಳ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಕೂಡ ತಾತ್ಕಲಿಕವಾಗಿ ದುರಸ್ತಿಪಡಿಸದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡ ಅನಿಲ್ ಕುಟ್ಟಪ್ಪ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಂತ ವಿಶಾಲವಾದ ಹಾಗೂ ಅತ್ಯಧಿಕ ಜನ ಸಂಖ್ಯೆಯನ್ನು ಹೊಂದಿಕೊಂಡಿರುವ ಗುಹ್ಯ, ಗೂಡುಗದ್ದೆ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದರೂ ಈ ಭಾಗದ ಜನಪ್ರತಿನಿಧಿಗಳು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸದೆ ತಮ್ಮ ಸ್ವಾರ್ಥ ಲಾಭಕ್ಕಾಗಿ ಪಂಚಾಯಿತಿಯನ್ನು ಬಳಸಿಕೊಳ್ಳುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಲೆ ಮಕ್ಕಳಿಗೆ, ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗಿದ್ದರೂ ಕೂಡ ಈ ಭಾಗದಿಂದ ಆಯ್ಕೆ ಆದ 8 ಮಂದಿ ಸದಸ್ಯರುಗಳು ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆಂದು ಟೀಕಿಸಿದರು. ಮುಂದಿನ 8 ದಿನಗಳ ಒಳಗೆ ರಸ್ತೆ ದುರಸ್ತಿ ಪಡಿಸದಿದ್ದಲ್ಲಿ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆಯನ್ನು ನಡೆಸಲಾಗುವದೆಂದು ಎಚ್ಚರಿಕೆಯನ್ನು ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಿ.ಪಿ.ಐ.(ಎಂ). ಪಕ್ಷದ ಪದಾಧಿಕಾರಿಗಳಾದ ಸಿ.ಕೆ. ಪವಿತ್ರ, ಕೆ.ಪಿ. ಮೋಹ್ದಿನ್ ಹಾಜರಿದ್ದರು.