ಮಡಿಕೇರಿ, ಜು. 3: ನುಡಿದಂತೆ ನಡೆಯುವ ಮೂಲಕ ಕಳೆದ ಮೂರು ವರ್ಷಗಳಲ್ಲಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿ, ಅದನ್ನು ಜನ ಸಾಮಾನ್ಯರಿಗೆ ತಲುಪಿಸಿದ ಕೀರ್ತಿ, ಸಾಧನೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ್ದಾಗಿದೆ ಎಂದು ಮೇಲ್ಮನೆ ಸದಸ್ಯೆ ಹಾಗೂ ಚಿತ್ರನಟಿ ತಾರಾ ಶ್ಲಾಘಿಸಿದ್ದಾರೆ.ಭಾರತೀಯ ಜನತಾ ಪಾರ್ಟಿಯ ವಿಸ್ತಾರಕ ಯೋಜನೆಯ ಪರಿಶೀಲನೆಯೊಂದಿಗೆ, ಮಡಿಕೇರಿಯ ವಾರ್ಡ್ ಸಭೆಯಲ್ಲಿ ಖುದ್ದು ಭಾಗವಹಿಸಿದ ಅವರು, ಬಿಜೆಪಿಯ ಕಾರ್ಯ ಯೋಜನೆ ಮತ್ತು ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಹೇಳಿದರು.ನಗರದ ವಾರ್ಡ್ 10 ಮತ್ತು 11ನೇ ವಿಭಾಗದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಮುಂಬರಲಿರುವ ವಿಧಾನ ಸಭೆಯ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಈಗಿನಿಂದಲೇ ಸಂಕಲ್ಪ ಮಾಡಬೇಕೆಂದು ಅವರು ಕರೆ ನೀಡಿದರು.

(ಮೊದಲ ಪುಟದಿಂದ) ಸ್ವತಂತ್ರ್ಯ ಭಾರತದಲ್ಲಿ ಶ್ರೇಷ್ಠ ತತ್ವ ಸಿದ್ಧಾಂತ ಮತ್ತು ದೇಶಾಭಿಮಾನದಿಂದ ರಾಜಕೀಯ ಶಕ್ತಿಯಾಗಿ ರೂಪುಗೊಂಡು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿಯಲ್ಲಿ ಇರುವದು ಅಥವಾ ಆ ಪಕ್ಷಕ್ಕಾಗಿ ದುಡಿಯುವದು ಹೆಮ್ಮೆ ಪಡುವಂತದ್ದು ಎಂದು ತಾರಾ ಬಣ್ಣಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಿಸ್ತಾರಕ್ ಯೋಜನೆಯಡಿ ಕಾರ್ಯಕರ್ತರ ಭೇಟಿಗಾಗಿ, ತಾರಾ ಅವರ ಪಾಲ್ಗೊಳ್ಳುವಿಕೆ ಹರ್ಷ ತಂದಿದ್ದು, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಮರಳಿ ಗೆಲ್ಲಿಸುವಲ್ಲಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುವದಾಗಿ ಭರವಸೆಯ ನುಡಿಯಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಸಾಮಾನ್ಯ ಕಾರ್ಯಕರ್ತ ಕೂಡ ಸಂಘಟನೆಗಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿರುವದು ಈ ಪಕ್ಷದ ಕಾರ್ಯಶೈಲಿ ಎಂದು ಅಭಿಪ್ರಾಯಪಟ್ಟರು.

ಪಕ್ಷದ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಮಾತನಾಡಿ, ಅಟಲ್ ಬಿಹಾರಿ ಪ್ರಧಾನಿಯಾಗಿ ದೇಶದ ಅಭಿವೃದ್ಧಿಯ ಹರಿಕಾರರೆಂಬ ಕೀರ್ತಿಗೆ ಭಾಜನರಾದರೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸರಕಾರ ವಿಶ್ವಮಟ್ಟದ ಗಮನ ಸೆಳೆದು ಸಾಮಾನ್ಯ ಜನತೆಯ ನಡುವೆ ಮನೆ ಮಾತಾಗಿರುವದು ಪಕ್ಷದ ಕಾರ್ಯಕರ್ತರಿಗೆ ಹೆಮ್ಮೆ ಎಂದು ಶ್ಲಾಘಿಸಿದರು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಅಧ್ಯಕ್ಷ ಡಾ|| ಬಿ.ಸಿ. ನವೀನ್ ಅವರುಗಳು ಮಾತನಾಡಿ, ಬಿಜೆಪಿಯಲ್ಲಿ ತೊಡಗಿಸಿಕೊಂಡು ಸಮಾಜ ಮುಖಿ ಸೇವೆ ಮಾಡಲು ಹಿರಿಯರ ತ್ಯಾಗ ಪ್ರೇರಣೆಯೆಂದು ನೆನಪಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ನಗರ ಕಾರ್ಯದರ್ಶಿ ಉಮೇಶ್ ಸುಬ್ರಮಣಿ ವಂದಿಸಿದರು.