ಮಡಿಕೇರಿ ಜು.2 : ನಗರಸಭೆಯ ಹಿರಿಯ ಸದಸ್ಯ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ಕೆ.ಎಂ.ಗಣೇಶ್ ಅವರನ್ನು ಟೀಕಿಸುವ ನೈತಿಕತೆ ಸದಸ್ಯ ಹೆಚ್.ಎಂ.ನಂದಕುಮಾರ್ ಅವರಿಗೆ ಇಲ್ಲವೆಂದು ನಗರಸಭಾ ಸದಸ್ಯೆ ಶ್ರೀಮತಿ ಬಂಗೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ನಂದಕುಮಾರ್ ಅವರ ಅತಿರೇಕದ ವರ್ತನೆಯೇ ಕಾಂಗ್ರೆಸ್ ಪಕ್ಷದ ಈ ಸ್ಥಿತಿಗೆ ಕಾರಣವೆಂದು ಆರೋಪಿಸಿದ್ದಾರೆ. ಪಕ್ಷ ಅಧಿಕಾರದಲ್ಲಿ ಇಲ್ಲದೆ ಇದ್ದಾಗ ಪಕ್ಷವನ್ನು ಸಂಘಟಿಸುವದಕ್ಕಾಗಿ ಗಣೇಶ್ ಅವರು ಸಾಕಷ್ಟು ಶ್ರಮಿಸಿದ್ದಾರೆ. ಇದರ ಫಲವಾಗಿ ಇಂದು ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದ ನಂದಕುಮಾರ್, ನಂತರ ಅಧಿಕಾರದ ರುಚಿ ಮುಗಿದ ಮೇಲೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಈ ರೀತಿಯ ಅಧಿಕಾರ ದಾಹದ ರಾಜಕಾರಣವನ್ನು ಕೆ.ಎಂ.ಗಣೇಶ್ ಅವರು ಎಂದಿಗೂ ಮಾಡಿಲ್ಲವೆಂದು ಸ್ಪಷ್ಟಪಡಿಸಿರುವ ಶ್ರೀಮತಿ ಬಂಗೇರ, ರಾಜಕಾರಣದಲ್ಲಿ ಮಹಿಳಾ ಸದಸ್ಯರಿಗೆ ಗೌರವ ನೀಡುವದನ್ನು ಮೊದಲು ನಂದಕುಮಾರ್ ಕರಗತ ಮಾಡಿಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ. ಮತ್ತೆ ಪಕ್ಷದಲ್ಲಿ ಬಲ ಹೆಚ್ಚಾಗಬೇಕಾದರೆ ನಂದಕುಮಾರ್ ಪಕ್ಷದಿಂದ ಹೊರ ಹೋಗಬೇಕೆಂದು ಒತ್ತಾಯಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಂದಕುಮಾರ್ ಅಧಿಕಾರಕ್ಕಾಗಿ ಮತ್ತೊಂದು ಪಕ್ಷದಲ್ಲಿ ಗುರುತಿಸಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲವೆಂದು ಟೀಕಿಸಿರುವ ಅವರು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಯಾರದ್ದೋ ಕಪಿಮುಷ್ಟಿಯಲ್ಲಿ ಸಿಲುಕಿದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.