ಮಡಿಕೇರಿ, ಜು. 3 : ಕೆ.ಬಾಡಗ ಗ್ರಾಮದ ಸರ್ವೆ ಸಂ. 400/1ರ ತಿರ್ನಾಡ ಪೈಸಾರಿ ಜಾಗದಲ್ಲಿ ಇತ್ತೀಚೆಗೆ ನಡೆಸಿದ ಸರ್ವೆ ಕಾರ್ಯದ ಸೂಕ್ತ ಮಾಹಿತಿ ಮತ್ತು ಹಾಡಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ಸಂಯೋಜಿತ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಸ್ಥಳೀಯ ಹಾಡಿ ನಿವಾಸಿಗಳು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸಮಿತಿಯ ಜಿಲ್ಲಾ ಸಂಚಾಲಕ ವೈ.ಕೆ.ಗಣೇಶ್, ವಿರಾಜಪೇಟೆ ತಾಲೂಕು ಕೆ.ಬಾಡಗ ಗ್ರಾಮದ ತಿರ್ನಾಡ ಪೈಸಾರಿ ಜಾಗದ ಸರ್ವೆ ಕಾರ್ಯವನ್ನು ಕಳೆದ ಏಪ್ರಿಲ್‍ನಲ್ಲಿ ನಡೆಸಲಾಗಿದೆ. ಸದರಿ ಸರ್ವೆಯಂತೆ ನಕಾಶೆಯಲ್ಲಿ ಎರಡು ಕಡೆ ಪಂಚಾಯತಿ ರಸ್ತೆ ಇದೆ ಮತ್ತು ಹಾಡಿ ಜಾಗದ ಕಾಲುದಾರಿಯನ್ನು ತೋರಿಸಲಾಗಿದೆ. ಆದರೆ ಹಾಡಿ ನಿವಾಸಿಗಳಿಗೆ ಓಡಾಡಲು ದಾರಿ ಇಲ್ಲದಾಗಿದ್ದು, ಪ್ರಭಾವಿಗಳು ತಡೆಯುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಪ್ರದೇಶದಲ್ಲಿ ಒಟ್ಟು 27 ಆದಿವಾಸಿ ಕುಟುಂಬಗಳು ವಾಸವಾಗಿದ್ದು, ಇಲ್ಲಿಯವರೆಗೆ ಮುರುಕಲು ಗುಡಿಸಲನ್ನೇ ಅವಲಂಭಿಸಿದ್ದಾರೆ. ಕುಟುಂಬಗಳಿಗೆ ವಸತಿ, ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ವ್ಯವಸ್ಥೆಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಂದಾಯ ಅಧಿಕಾರಿಗಳು ನಡೆಸಿರುವ ಸರ್ವೆ ಕಾರ್ಯದ ಮಾಹಿತಿಯನ್ನು ಇಲ್ಲಿಯವರೆಗೆ ನೀಡಿಲ್ಲ. ತಹಶೀಲ್ದಾರರ ಕಛೇರಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಸರ್ವೆ ಕಾರ್ಯದ ಬಗ್ಗೆ ಸಂಶಯಗಳಿದೆ ಎಂದು ಆರೋಪಿಸಿರುವ ಗಣೇಶ್ ಜಿಲ್ಲಾಧಿಕಾರಿಗಳು ಹಾಡಿ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ, ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಮುಂದಿನ ಒಂದು ವಾರದೊಳಗೆ ಹಾಡಿ ಜನರ ಮನವಿಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಹಾಡಿ ಮುಖಂಡ ಪಿ.ಎಂ.ತಮ್ಮು ಮತ್ತಿತರ ಪ್ರಮುಖರು ಹಾಜರಿದ್ದರು.