ಗೋಣಿಕೊಪ್ಪಲು, ಜು. 2 : ಜಾತ್ಯಾತೀತ ಜನತಾದಳ ಪಕ್ಷಕ್ಕೆ ಮಾಜಿ ಸಂಸದ ಹೆಚ್ ವಿಶ್ವನಾಥ್ ಸೇರುತ್ತಿರುವದರಿಂದ ಪಕ್ಷದ ವರ್ಚಸ್ಸು ಹೆಚ್ಚಲಿದೆ ಎಂದು ಜೆಡಿಎಸ್ ವೀರಾಜಪೇಟೆ ಕ್ಷೇತ್ರ ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ ಹೇಳಿದರು.

ಜನ ಸೇವೆ ಮಾಡುವ ಉದ್ದೇಶ ಹೊಂದಿರುವ ವಿಶ್ವನಾಥ್ ಅವರ ಆಗಮನದಿಂದ ಪಕ್ಷಕ್ಕೆ ಹೆಚ್ಚಿನ ಲಾಭವೇ ಆಗಲಿದೆ. ಪಕ್ಷ ಸಂಘಟನೆಗೆ ಇವರ ಸಲಹೆಗಳು ಪ್ರಯೋಜನವಾಗಲಿದೆ. ಇದು ಸ್ವಾಗತಾರ್ಹ, ಈಗಾಗಲೇ ಕ್ಷೇತ್ರದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಪಕ್ಷ ಇನ್ನಷ್ಟು ಸಂಘಟಿತವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕ್ಷೇತ್ರ ಕಾರ್ಯಾಧ್ಯಕ್ಷ ಸುರೇಶ್ ಮಾತನಾಡಿ, ಹಿರಿಯ ಮುತ್ಸದ್ಧಿ ಎಂ ಸಿ ನಾಣಯ್ಯ ಮುಂದಾಳತ್ವದಲ್ಲಿ ತಾಲೂಕು ಪಕ್ಷ ಸಂಘಟನೆಯಾಗಬೇಕಿದೆ. ಈ ಬಗ್ಗೆ ನಾವು ಎಂ ಸಿ ನಾಣಯ್ಯ ಅವರನ್ನು ಮನವಿ ಮಾಡಿಕೊಳ್ಳುತ್ತಿದ್ದೇವೆ. ಇದರೊಂದಿಗೆ ವಿಶ್ವನಾಥ್ ಕೂಡ ಪಕ್ಷ ಸೇರುತ್ತಿರುವದರಿಂದ ಕೊಡಗಿನ ಎರಡು ವಿಧಾನ ಸಭಾ ಕ್ಷೇತ್ರವನ್ನು ಜೆಡಿಎಸ್ ಗೆದ್ದುಕೊಳ್ಳಲಿದೆ ಎಂದರು.

ವಿದ್ಯುತ್ ತಂತಿಗೆ ಕಾಡಾನೆಗಳು ಸಿಲುಕಿ ಸಾವನ್ನಪ್ಪಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಕಾರಣ. ಅಧಿಕಾರಿಗಳೇ ಸರ್ಕಾರ ನಡೆಸುತ್ತಿರುವದರಿಂದ ಹಿಡಿತವಿಲ್ಲದೆ ಸರ್ಕಾರ ನಡೆಯುತ್ತಿದೆ. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಇಂತಹ ಘೋರ ಘಟನೆಗಳು ನಡೆದಿರಲಿಲ್ಲ. ವಿದ್ಯುತ್ ಕಂಬಗಳನ್ನು ಸುಮಾರು 350 ಅಡಿಗಳಷ್ಟು ದೂರ ನಿರ್ಮಿಸುವ ಮೂಲಕ ಆನೆಗಳ ಸಾವಿಗೆ ಅಧಿಕಾರಿಗಳೇ ಕಾರಣವಾಗುತ್ತಿದ್ದಾರೆ ಎಂದು ದೂರಿದರು.

ವಕ್ತಾರ ಎಂ ಟಿ ಕಾರ್ಯಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಕಾಂಗ್ರೆಸ್, ಹಾಗೂ ಬಿಜೆಪಿ ಪಕ್ಷಗಳು ಕಾರಣ. ವರದಿ ಜಾರಿಯಿಂದ ಸಮಸ್ಯೆ ಇದೆ ಎಂದು ಹೇಳುತ್ತಿದ್ದ ಕೊಡಗಿನ ಎರಡು ಶಾಸಕರುಗಳು ಈಗ ವರದಿಯಿಂದ ಸಮಸ್ಯೆ ಇಲ್ಲ ಎಂದು ಹೇಳುವ ಮೂಲಕ ಜನತೆಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಇದರಿಂದಾಗಿ ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಲೋಹಿತ್ ಉಪಸ್ಥಿತರಿದ್ದರು.