ಸೋಮವಾರಪೇಟೆ, ಜು.3: ಸುಮಾರು 8 ದಶಕಗಳನ್ನು ಪೂರೈಸಿರುವ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಚನ್ನಬಸಪ್ಪ ಸಭಾಂಗಣ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಇದನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಹಾಲಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿ ರಚಿಸುವಂತೆ ಶಾಸಕ ಅಪ್ಪಚ್ಚುರಂಜನ್‍ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕರೆದಿದ್ದ ಚನ್ನಬಸಪ್ಪ ಸಭಾಂಗಣ ದುರಸ್ತಿ, ಅಭಿವೃದ್ಧಿ ಹಾಗೂ ನಿರ್ವಹಣೆ ಬಗ್ಗೆ ಚರ್ಚಿಸಿ, ನಿರ್ವಹಣೆಯಲ್ಲಿ ವಿಫಲವಾಗಿರುವ ಹಾಲಿ ಸಮಿತಿಯನ್ನು ವಿಸರ್ಜಿಸಿ ಕ್ರಿಯಾಶೀಲತೆಯಿಂದ ಕೂಡಿರುವ ನೂತನ ಸಮಿತಿ ರಚಿಸುವಂತೆ ತೀರ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಸುಮಾರು 80 ವರ್ಷ ಇತಿಹಾಸ ಹೊಂದಿರುವ ಈ ಸಭಾಂಗಣದಲ್ಲಿ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳು, ಸಭೆ ಸಮಾರಂಭಗಳು, ಸರಕಾರಿ ಕಾರ್ಯಕ್ರಮಗಳು, ವಿವಿಧ ಇಲಾಖೆಗಳ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿತ್ತು. ಇದೀಗ ಸಭಾಂಗಣ ಕಟ್ಟಡ, ಮೇಲ್ಛಾವಣಿ ಹಾಗೂ ಕಿಟಕಿ ಬಾಗಿಲುಗಳು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಕ್ರಿಯಾಶೀಲತೆಯಿಂದ ಕೂಡಿರುವ ಸಮಿತಿ ರಚನೆಯಿಂದ ಮಾತ್ರ ಹಣವನ್ನು ಕ್ರೋಢೀಕರಿಸಿ ದುರಸ್ತಿಪಡಿಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಹಾಗೆಯೇ ಇದರ ನಿರ್ವಹಣೆ ಜವಾಬ್ದಾರಿಯನ್ನು ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರುಗಳು, ಅಧಿಕಾರಿಗಳು ಸೇರಿದಂತೆ ಸಮಿತಿ ರಚಿಸುವದು ಹಾಗೂ ಸಮಿತಿಗೆ ಕಟ್ಟಡದ ದಾನಿಗಳಾದ ಚನ್ನಬಸಪ್ಪರವರ ಕುಟುಂಬದ ಸದಸ್ಯರನ್ನೂ ಸೇರಿಸಿಕೊಳ್ಳುವದು ಸೂಕ್ತ ಎಂದು ಅಭಿಪ್ರಾಯಿಸಿದರು.

ಸಹಿಮಾಪ್ರಾ ಶಾಲಾ ಮುಖ್ಯೋಪಾಧ್ಯಾಯಿನಿ ಅಣ್ಣಮ್ಮರವರು, ಈ ಹಿಂದೆ ಚನ್ನಬಸಪ್ಪ ಸ್ಟೇಜ್ ಕಮಿಟಿ ಹೆಸರಿನಲ್ಲಿ ಪಟ್ಟಣದ ವಿಎಸ್‍ಎಸ್‍ಎನ್ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆ ಸಂಖ್ಯೆ 108/ಬಿ ಬ್ಯಾಂಕ್ ಖಾತೆ ಇತ್ತು. ಆದರೆ ಅದಕ್ಕೆ ಸಂಬಂಧಿಸಿದ ಯಾವದೇ ಪಾಸ್ ಪುಸ್ತಕವಾಗಲಿ, ಲೆಕ್ಕಪತ್ರ ನಿರ್ವಹಣೆಯ ವಿವರವಾಗಲಿ ಶಾಲೆಯಲ್ಲಿ ಇಲ್ಲ ಎಂದು ಸಭೆಯ ಗಮನಕ್ಕೆ ತಂದರು.

2015ರಲ್ಲಿ ಚುಕ್ತಾಗೊಳಿಸಿದ್ದು, ಅಂದು ಖಾತೆಯಲ್ಲಿದ್ದ ರೂ. 8,775 ಡ್ರಾ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಸಭಾಂಗಣವನ್ನು ದುರಸ್ತಿ ಪಡಿಸದೇ ಹಾಗೇ ಬಿಟ್ಟಲ್ಲಿ, ಕಟ್ಟಡ ನೆಲಸಮಗೊಳ್ಳುವದರಲ್ಲಿ ಸಂಶಯವಿಲ್ಲ ಎಂದಾಗ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮರವರುಗಳು ದನಿಗೂಡಿಸಿದರಲ್ಲದೆ ಕೂಡಲೇ ಹಳೆ ಸಮಿತಿಯನ್ನು ವಿಸರ್ಜಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯೆ ತಂಗಮ್ಮ ಮಾತನಾಡಿ, ತಾನು ಈ ಶಾಲೆಯ ಶಿಕ್ಷಕಿಯಾಗಿದ್ದ ಸಂದರ್ಭ ಆ ಖಾತೆಯಲ್ಲಿ ರು. 17,680 ಹಣವಿತ್ತು ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಬ್ಯಾಂಕನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಬಯಸಿದಾಗ, ಖಾತೆಯನ್ನು ಅದರಂತೆ ಹಳೆ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸುವಂತೆ ಸಭೆ ತೀರ್ಮಾನಿಸಿತು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಪ್ರಮುಖರಾದ ಮಹೇಶ್ ತಿಮ್ಮಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಶಾಲ, ಶಿಕ್ಷಕರುಗಳು, ಎಸ್‍ಡಿಎಂಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.