ಮಡಿಕೇರಿ, ಜು. 3: ಕೊಡಗಿನ ಮಳೆಗಾಲದಲ್ಲಿ ಜೀವ ಸಂಕುಲದ ಆರೋಗ್ಯ ರಕ್ಷಣೆಗೆ ಪೂರಕವಾಗಿರುವ ಪ್ರಮುಖ ಆಹಾರಗಳಲ್ಲಿ ಕಣಿಲೆಯೂ ಒಂದು. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಲಭಿಸುವ ಕಾಡಿನಲ್ಲಿ ಇರುವ ಕಣಿಲೆಯನ್ನು ಓಟೆ ಅಥವಾ ಬಿದಿರು ನಡುವಿನಿಂದ ಬೇರ್ಪಡಿಸಿ ಅದನ್ನು ಸುತ್ತುವರಿದಿರುವ ಕವಚದಂತಹ ಹೊದಿಕೆಯಿಂದ ಕೂಡಿದ ಸಿಪ್ಪೆಯನ್ನು ಬೇರ್ಪಡಿಸಿ ಸ್ವಚ್ಛಗೊಳಿಸಬೇಕು.ಆ ಬಳಿಕ ಅವುಗಳನ್ನು ಸಣ್ಣಗೆ ಸಾಂಬಾರು ಅಥವಾ ಪಲ್ಯಕ್ಕೆ ಉಪಯೋಗವಾಗುವಂತೆ ಹೆಚ್ಚಿ, ಕವರ್‍ಗಳಲ್ಲಿ ತುಂಬಿ ತಂದು ಸಂತೆ ಬೀದಿಗಳಲ್ಲಿ ಎಲ್ಲೆಂದರಲ್ಲಿ ಗ್ರಾಮೀಣ ಜನ ಮಾರಾಟಗೊಳಿಸುವ ದೃಶ್ಯ ಸಾಮಾನ್ಯ. ಈಗ ಈ ಕಣಿಲೆಗೂ ಅರಣ್ಯ ಉತ್ಪನ್ನವೆಂಬ ಕಿರಿಕಿರಿ ಆ ಹಳ್ಳಿ ರೈತನಿಗೆ ತಟ್ಟತೊಡಗಿದೆ.

ಹೀಗಾಗಿ ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ಆತ ಅಥವಾ ಆಕೆ ದೂರದ ಹಳ್ಳಿಯಿಂದ ಪೇಟೆಗೆ ತಂದರೆ, ಗ್ರಾಹಕರಿಗೆ ಅದು ನೇರವಾಗಿ ಕೈಗೆಟಕುತ್ತಿಲ್ಲ. ಹಳ್ಳಿಯವರು ರೂ. 25 ರಿಂದ 30ಕ್ಕೆ ಒಂದಿಷ್ಟು ಕಣಿಲೆಯನ್ನು ಕವರ್‍ಗಳಲ್ಲಿ ತುಂಬಿ ಮಾರುತ್ತಿದ್ದರೆ, ಮಧ್ಯವರ್ತಿಗಳು ಒಟ್ಟಿಗೆ ಹೊಂದಿಕೊಂಡು ಅವರ ಕಣ್ಣೆದುರೇ ರೂ. 80 ರಿಂದ 100ರ ತನಕ ಮಾರಾಟಗೊಳಿಸಿ ಗ್ರಾಹಕರನ್ನು ವಂಚಿಸುತ್ತಾರೆ!

ಹಳ್ಳಿಯಾತ ಮಾತ್ರ ಕಷ್ಟಪಟ್ಟು ತರುವ ಇಂತಹ ಪದಾರ್ಥಗಳಿಂದ ತನ್ನ ಪರಿಶ್ರಮದೊಂದಿಗೆ ಬಸ್ಸಿನ ಪ್ರಯಾಣ ಸಹಿತ ಕಾಫಿ-ತಿಂಡಿ ಇತ್ಯಾದಿಗೆ ಕಣಿಲೆ ಹಣದಲ್ಲಿ ಖರ್ಚು ಮಾಡಿಕೊಂಡು ಬರಿಗೈನಲ್ಲೇ ಹಿಂತಿರುಗುತ್ತಾನೆ. ಈತನಿಗೆ ಒಂದೆಡೆ ಅರಣ್ಯ-ಪೊಲೀಸ್ ಸಿಬ್ಬಂದಿಯ ಕಿರಿಕಿರಿಯಾದರೆ, ಮಧ್ಯವರ್ತಿಗಳ ಹಾವಳಿ ಹೆಣಗಾಡುವಂತೆ ಮಾಡುತ್ತಿ ರುವ ಆರೋಪವಿದೆ. ಹೀಗಾಗಿ ಕಣಿಲೆಯ ಗ್ರಾಹಕ ಮಾತ್ರ ದುಬಾರಿ ಹಣ ತೆರಲೇಬೇಕು... ಒಟ್ಟಿನಲ್ಲಿ ಕಣಿಲೆಗೂ ತಪ್ಪಿಲ್ಲ ಕಿರಿಕಿರಿ...?

-ಶ್ರೀಸುತ