ಮಡಿಕೇರಿ, ಜು. 3: ಹೊಳೆ ಬದಿಯಲ್ಲಿ ಬಿದಿರು ಬುಡದಿಂದ ಕಣಿಲೆ ಸಂಗ್ರಹಿಸಲು ಹೋಗಿದ್ದ ಸಹೋದರ ಸಂಬಂಧಿ ವಿದ್ಯಾರ್ಥಿಗಳಿಬ್ಬರಲ್ಲಿ, ಕಿರಿಯವನು ಆಕಸ್ಮಿಕ ನೀರು ಪಾಲಾಗುತ್ತಿದ್ದ ವೇಳೆ ಹಿರಿಯವನು ಆತನ ರಕ್ಷಣೆಗೆಂದು ಧಾವಿಸಿ, ಇಬ್ಬರು ನೀರು ಪಾಲಾದ ದಾರುಣ ಘಟನೆ ಕೋಡಂಬೂರುವಿನಲ್ಲಿ ಸಂಭವಿಸಿದೆ.ಮೂರ್ನಾಡು ಸಮೀಪದ ಕೋಡಂಬೂರು ನಿವಾಸಿ ಎಂ. ಲೋಕೇಶ್ ಎಂಬವರ ಪುತ್ರ ದರ್ಶನ್ (18) ಹಾಗೂ ಅದೇ ಗ್ರಾಮದ ಎಂ. ಕಾವೇರಪ್ಪ ಎಂಬವರ ಪುತ್ರ ಜಯಂತ್ (14) ಎಂಬಿಬ್ಬರು ಅಲ್ಲಿನ ಉಪ್ಪುಗುಂಡಿ ಹೊಳೆಯ ಸಮೀಪ ಕಣಿಲೆ ತರಲೆಂದು ತೆರಳಿದ್ದಾರೆ.

ಭಾನುವಾರದ ರಜೆಯ ನಡುವೆ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಬಿದಿರು ಬುಡದಿಂದ ಒಂದಿಷ್ಟು ಕಣಿಲೆ ಸಂಗ್ರಹಿಸಿದ ಇವರಿಬ್ಬರು, ಉಪ್ಪುಗುಂಡಿ ಎಂಬಲ್ಲಿ ಜಯಂತ್ ಕೈಕಾಲು ತೊಳೆಯಲು ಮುಂದಾಗಿ ಜಾರಿ ಬಿದ್ದು ಮುಳುಗಿದ್ದಾನೆ. ಈ ವೇಳೆ ದರ್ಶನ್ ಆತನ ರಕ್ಷಣೆಗಾಗಿ ಸಾಕಷ್ಟು ಪ್ರಯತ್ನಿಸಿ, ಉದ್ದದ ಕೋಲೊಂದನ್ನು ಬಿಟ್ಟರೂ ಸಾಧ್ಯವಾಗದೆ, ತಾನೇ ಬಟ್ಟೆ ಬಿಚ್ಚಿ ನೀರಿಗೆ ಧುಮುಕಿದ್ದಾನೆ. ಈ ಸಂದರ್ಭ ದರ್ಶನ್‍ಗೆ ಈಜು ಗೊತ್ತಿದ್ದರೂ ಕೂಡ, ಮೊದಲೇ ಮುಳುಗಿ ತ್ರಾಣ ಕಳೆದುಕೊಂಡಿದ್ದ ಜಯಂತ್, ಈತನನ್ನು ಸುಳಿಯತ್ತಲೇ ಸೆಳೆದುಕೊಂಡಿದ್ದಾಗಿ ತಿಳಿದು ಬಂದಿದೆ.

ಸಂಜೆಗತ್ತಲೆ ನಡುವೆ ಮಕ್ಕಳಿಬ್ಬರು ಕಾಣೆಯಾಗಿರುವ ಬಗ್ಗೆ ಪೋಷಕರು ಮತ್ತು ಸಂಬಂಧಿ ಹುಡುಕಾಟ ನಡೆಸಿದರೂ ಯಾವದೇ ಪ್ರಯೋಜನವಾಗಿಲ್ಲ. ರಾತ್ರಿ ಬಹಳ ಹೊತ್ತಿನಲ್ಲಿಯೂ ಮಕ್ಕಳಿಗಾಗಿ ಪರಿತಪಿಸಿದ ಕುಟುಂಬ ವರ್ಗ ತೀವ್ರ ಆತಂಕಗೊಂಡಿದೆ.

ಜ್ಯೋತಿಷಿಯ ಮೊರೆ: ಈ ನಡುವೆ ದರ್ಶನ್ ಹಾಗೂ ಜಯಂತ್‍ನನ್ನು ಸಂಜೆ 4 ಗಂಟೆ ಹೊತ್ತಿನಲ್ಲಿ ಕೂಡ ಊರುಮಂದಿ ಕಂಡು ಮಾತನಾಡಿದ್ದು, ಆ ಬಳಿಕ ಹಠಾತ್ ಕಾಣೆಯಾಗಿ ದ್ದರಿಂದ ಕೋಡಂಬೂರು ಶ್ರೀ ಭದ್ರಕಾಳಿ ದೇಗುಲ ಅರ್ಚಕರಲ್ಲಿ ಜ್ಯೋತಿಷ್ಯ ಕೇಳಿದ್ದಾರೆ. ಆ ಮೇರೆಗೆ ಹುಡುಕಾಟ ಮುಂದುವರಿಸಿದಾಗ, ಇಂದು ಬೆಳಿಗ್ಗೆ ಉಪ್ಪುಗುಂಡಿ ಬದಿಯಲ್ಲಿ ದರ್ಶನ್ ಬಿಚ್ಚಿಟ್ಟಿದ್ದ ವಸ್ತ್ರ ಪತ್ತೆಯಾಗಿದ್ದು, ಅಲ್ಲಿ ಸುಮಾರು 10 ಅಡಿಗಳಷ್ಟು ಆಳದಲ್ಲಿ ಈ ವಿದ್ಯಾರ್ಥಿಗಳಿಬ್ಬರು ಮುಳುಗಿ ಪ್ರಾಣ ಕಳೆದುಕೊಂಡಿದ್ದು ಖಾತರಿಯಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು, ಅಲ್ಲಿನ ನಿವಾಸಿಗಳಾದ ಬಿಪಿನ್ ಹಾಗೂ ಜಗನ್ ಎಂಬವರ ಸಹಾಯದಿಂದ ವಿದ್ಯಾರ್ಥಿಗಳ ಶವಗಳನ್ನು

(ಮೊದಲ ಪುಟದಿಂದ) ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಮೂರ್ನಾಡು ಉಪಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ತಂಡ ಸಹಿತ ಅಗ್ನಿಶಾಮಕ ದಳ ಧಾವಿಸಿದೆ. ಘಟನೆ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದ ದರ್ಶನ್ ಹಾಗೂ ಅಲ್ಲಿನ ಪ್ರೌಢಶಾಲೆಯ 9ನೇ ತರಗತಿ ಓದುತ್ತಿದ್ದ ಜಯಂತ್ ಇಬ್ಬರು ಕೂಡ ಸೋದರ ಸಂಬಂಧಿಗಳಾಗಿದ್ದರೆ, ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಬ್ಬರ ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಈ ವೇಳೆ ಮೂರ್ನಾಡು - ಕೋಡಂಬೂರು ಸುತ್ತಮುತ್ತಲಿನ ನಿವಾಸಿಗಳು ಹಾಗೂ ಮೃತ ವಿದ್ಯಾರ್ಥಿಗಳ ಬಂಧುಗಳು, ದುಃಖದ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.