ಸೋಮವಾರಪೇಟೆ, ಜು. 2: 2017-18ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮಹತ್ವಾಕಾಂಕ್ಷೆಯ ಕೃಷಿ ಭಾಗ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕೃಷಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ಇಲಾಖಾ ನಿರ್ದೇಶಕ ಡಾ. ರಾಜಶೇಖರ್ ಮನವಿ ಮಾಡಿದ್ದಾರೆ.ಕೃಷಿ ಭಾಗ್ಯ ಯೋಜನೆಯಡಿ ಮಳೆ ನೀರಿನ ಸಂಗ್ರಹಣೆ, ಕೃಷಿ ಹೊಂಡ ತೆಗೆಯುವದು, ಶೇಖರಿಸಿದ ನೀರನ್ನು ಮೇಲೆತ್ತಲು ಪಂಪ್‍ಸೆಟ್ ಅಳವಡಿಕೆ, ನೀರು ವ್ಯರ್ಥವಾಗದಂತೆ ತಡೆಯಲು ತುಂತುರು ನೀರಾವರಿ ಘಟಕಗಳನ್ನು ರೈತರಿಗೆ ಸಹಾಯಧನದಡಿ ವಿತರಿಸಲಾಗುವದು ಎಂದು ರಾಜಶೇಖರ್ ತಿಳಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಂದ ಪಡೆದು ಸಲ್ಲಿಸಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖಾಧಿಕಾರಿಗಳನ್ನು ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.