ಕುಶಾಲನಗರ, ಜು. 3: ದುಬಾರೆ ಸಾಕಾನೆ ಶಿಬಿರದಲ್ಲಿ ನಡೆಯುತ್ತಿದ್ದ ರ್ಯಾಫ್ಟಿಂಗ್ ಸಾಹಸಿ ಕ್ರೀಡೆಯನ್ನು ಈ ಸಾಲಿನಿಂದ ಜಿಲ್ಲಾಡಳಿತದ ಮೂಲಕ ಟೆಂಡರ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಖಾಸಗಿ ವ್ಯಕ್ತಿಗಳ ಮೂಲಕ ನಡೆಯುತ್ತಿದ್ದ ಈ ಸಾಹಸ ಕ್ರೀಡೆ ಪ್ರವಾಸಿಗರಿಗೆ ಮನೋರಂಜನೆ ನೀಡುತ್ತಿತ್ತು. ಈ ಸಾಲಿನಿಂದ ಹೊರಗುತ್ತಿಗೆ ಮೂಲಕ ಹರಾಜು ನಡೆಸಲು ನಿರ್ಧರಿಸಲಾಗಿದೆ.

ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು 12 ತಿಂಗಳ ಕಾಲದ ಅವಧಿಗೆ ಗುತ್ತಿಗೆ ನೀಡಲಿದೆ. ಟೆಂಡರ್‍ನಲ್ಲಿ ಭಾಗವಹಿಸುವವರು 3 ಲಕ್ಷ ಇಎಂಡಿ ಪಾವತಿಸಬೇಕಾಗಿದ್ದು ಹಲವು ಷರತ್ತುಗಳನ್ನು ಒಡ್ಡಿದೆ. ಕಳೆದ ಹಲವು ವರ್ಷಗಳಿಂದ ದುಬಾರೆ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ನಡೆಸುತ್ತಿದ್ದ ಸ್ಥಳೀಯ ಖಾಸಗಿ ಉದ್ಯಮಿಗಳು ಇದರಿಂದ ಆತಂಕಕ್ಕೆ ಒಳಗಾಗಿರುವದು ಕಂಡುಬಂದಿದೆ. ಅಂದಾಜು 15 ಕಂಪೆನಿಗಳ ಮಾಲೀಕರು 100 ಕ್ಕೂ ಅಧಿಕ ರ್ಯಾಫ್ಟರ್‍ಗಳ ಕಾರ್ಯಾಚರಣೆ ಮಾಡುತ್ತಿದ್ದು ಪ್ರಸಕ್ತ ಜಿಲ್ಲಾಡಳಿತ ನೂತನ ಆದೇಶದಿಂದ ಪರದಾಡುವಂತಾಗಿದೆ.

ರ್ಯಾಫ್ಟಿಂಗ್ ಕ್ರೀಡೆಯ ಸಂದರ್ಭ ಪ್ರವಾಸಿಗರ ಭದ್ರತೆ, ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರವಾಸೋದ್ಯಮ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಲಕ್ಷಾಂತರ ಆದಾಯ ಗಳಿಸುವ ರ್ಯಾಫ್ಟಿಂಗ್ ಕ್ರೀಡೆಯಿಂದ ಸರಕಾರಕ್ಕೆ ಯಾವುದೇ ರೀತಿಯ ಲಾಭ ಉಂಟಾಗದ ಹಿನ್ನಲೆಯಲ್ಲಿ ಟೆಂಡರ್ ಮೂಲಕ ಗುತ್ತಿಗೆ ನೀಡಿದಲ್ಲಿ ಈ ಆದಾಯ ಸರಕಾರದ ಬೊಕ್ಕಸಕ್ಕೆ ಬರುವ ನಿರೀಕ್ಷೆ ಹಾಗೂ ನಿಯಮಾನುಸಾರ ರ್ಯಾಫ್ಟಿಂಗ್ ಕ್ರೀಡೆ ನಡೆಸುವ ಉದ್ದೇಶದಿಂದ ಈ ಸಾಲಿನಿಂದ ಜಿಲ್ಲಾಡಳಿತದ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲು ಕ್ರಮಕೈಗೊಳ್ಳಲಾಗಿದ್ದು ಸ್ಥಳೀಯರು ಸೇರಿದಂತೆ ಹೊರಗಿನವರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿ.ಡಿಸೋಜ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಜಿಲ್ಲಾಡಳಿತದ ಈ ನಿರ್ಧಾರದಿಂದ ರ್ಯಾಫ್ಟಿಂಗ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಸ್ಥಳೀಯ ಸುಮಾರು 150 ರಿಂದ 200 ಕಾರ್ಮಿಕರು ಬೀದಿ ಪಾಲಾಗುವ ಸಾಧ್ಯತೆಯಿದೆ ಎಂದು ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಕೃಷ್ಣಪ್ಪ ತಿಳಿಸಿದ್ದಾರೆ. ಅನ್ಯರಿಗೆ ಗುತ್ತಿಗೆ ನೀಡುವ ಮೂಲಕ ಕಾರ್ಮಿಕರು ಹಾಗೂ ರ್ಯಾಫ್ಟಿಂಗ್ ಮಾಲೀಕರು ಅನಾಥರಾಗುವ ಸಂಭವವಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಉದ್ಯಮಿ ಹೋಟೆಲ್ ದುಬಾರೆ ಇನ್ ಮಾಲೀಕರಾದ ಕೆ.ಎಸ್.ರತೀಶ್, ಕಳೆದ ಹಲವು ವರ್ಷಗಳಿಂದ ಈ ಸಾಹಸಿ ಕ್ರೀಡೆಯನ್ನು ನಿಯಮಾನುಸಾರ ನಡೆಸಿಕೊಂಡು ಬರಲಾಗುತ್ತಿತ್ತು. ಹಲವು ಇಲಾಖೆಗಳಿಂದ ಅನುಮತಿ ಪಡೆದು ಸ್ಥಳೀಯರೇ ರ್ಯಾಫ್ಟಿಂಗ್ ಕ್ರೀಡೆ ನಡೆಸುವದರೊಂದಿಗೆ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶ ಕಲ್ಪಿಸಲಾಗಿತ್ತು. ಸ್ವಚ್ಛತೆ ಹಾಗೂ ಪ್ರವಾಸಿಗರ ಭದ್ರತೆ ದೃಷ್ಟಿಯಿಂದ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ 3 ವರ್ಷಗಳ ಹಿಂದೆ ಕೊಡಗು ಜಿಲ್ಲಾಧಿಕಾರಿಗಳಾಗಿದ್ದ ಅನುರಾಗ್ ತಿವಾರಿ ಪ್ರವಾಸೋದ್ಯಮ ಇಲಾಖೆ ಮೂಲಕ ರ್ಯಾಫ್ಟಿಂಗ್ ಕ್ರೀಡೆ ನಡೆಸುವಂತೆ ಆದೇಶ ಹೊರಡಿಸಿದ್ದರೂ ಅದು ಇಲ್ಲಿಯವರೆಗೆ ಕಾರ್ಯಗತವಾಗಿರಲಿಲ್ಲ.

ನಂಜರಾಯಪಟ್ಟಣದಿಂದ ದುಬಾರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಸರಕಾರ ಚಿಂತನೆ ಹರಿಸಿದ್ದು 2 ಕಿಮೀ ಉದ್ದದ ರಸ್ತೆ ಕಾಂಕ್ರೀಟಿಕರಣಗೊಳ್ಳುವ ನಿರೀಕ್ಷೆಯಿದೆ. ಇದೀಗ ಮಳೆಗಾಲ ಆರಂಭಗೊಂಡಿದ್ದು ದುಬಾರೆಯಲ್ಲಿ ಈಗಾಗಲೆ ರ್ಯಾಫ್ಟಿಂಗ್ ಕ್ರೀಡೆಗೆ ಚಾಲನೆ ದೊರೆತಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚಳಗೊಂಡಿದೆ.