ಶ್ರೀಮಂಗಲ, ಜು. 3: ಚೇಲಾವರ ಜಲಪಾತದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ದುರ್ಮರಣಕ್ಕೀಡಾದ ಇಬ್ಬರು ವಿದ್ಯಾರ್ಥಿಗಳ ಪೊಷಕರುಗಳ ಮನೆಗೆ ತೆರಳಿ ಮುಖ್ಯ ಮಂತ್ರಿ ಪರಿಹಾರ ನಿಧಿಯಡಿ ತಲಾ ಒಂದು ಲಕ್ಷದಂತೆ ಪರಿಹಾರ ಚೆಕ್ಕನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಹಸ್ತಾಂತರಿಸಿದರು.6.9.2016ರಲ್ಲಿ ಸಾಯಿ ಶಂಕರ ವಿದ್ಯಾ ಸಂಸ್ಥೆಯಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದ ಕೊಟ್ಟಂಗಡ ಸೋಮಣ್ಣ (20) ಮತ್ತು ಬಾಚರಣಿಯಂಡ ಸೋಮಣ್ಣ (20) ಇಬ್ಬರು ವಿದ್ಯಾರ್ಥಿಗಳು ಚೇಲಾವರ ಜಲಪಾತ ವೀಕ್ಷಣೆಗೆಂದು ತೆರಳಿದ ಸಂದರ್ಭ ಆಕಸ್ಮಿಕವಾಗಿ ಬಾಚರಣಿಯಂಡ ಸೋಮಣ್ಣ ಜಾರಿ ಬಿದ್ದಾಗ ಅವರನ್ನು ರಕ್ಷಿಸಲು ದಾವಿಸಿದ ಕೊಟ್ಟಂಗಡ ಸೋಮಣ್ಣ ಕೂಡ ಜಾರಿ ಬಿದ್ದು ಇಬ್ಬರು ದುರ್ಮರಣಕ್ಕೀಡಾಗಿದ್ದರು. ಬಲ್ಯಮುಂಡೂರು ಗ್ರಾಮದ ಕೊಟ್ಟಂಗಡ ಸೋಮಣ್ಣ ಅವರ ಮನೆಗೆ ತೆರಳಿದ ಎಂ.ಎಲ್.ಸಿ ವೀಣಾ ಅಚ್ಚಯ್ಯ ಅವರು ಸೋಮಣ್ಣ ಅವರ ತಾಯಿ ಪಾರ್ವತಿಯವರಿಗೆ ಚೆಕ್ ಹಸ್ತಾಂತರಿಸಿದರು. ಬೆಳ್ಳೂರು ಗ್ರಾಮದ ಬಾಚರಣಿಯಂಡ ಸೋಮಣ್ಣರವರ ಮನೆಗೆ ತೆರಳಿ ತಂದೆ ತಾಯಿ, ಕುಟ್ಟಪ್ಪ ಹಾಗೂ ರತಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ವೀಣಾ ಅಚ್ಚಯ್ಯ ಅವರು ಉಭಯ ಕಡೆಯ ಪೊಷಕರಿಗೂ ಸಾಂತ್ವನ ಹೇಳಿ ಸಮಾಧಾನ ಪಡಿಸಿದರು.

ಚೆಕ್ ಸ್ವೀಕರಿಸಿ ಮಾತನಾಡಿದ ಪೊಷಕರು ಚೇಲಾವರ ಜಲಪಾತದಲ್ಲಿ ಮುಂದೆ ಇಂತಹ ದುರ್ಘಟನೆ ನಡೆಯದಂತೆ ಸುರಕ್ಷ್ಷಿತ ಕ್ರಮ ಕೈಗೊಳ್ಳುವಂತೆ ಎಂ.ಎಲ್.ಸಿಯವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ವೀಣಾ ಅಚ್ಚಯ್ಯ ಅವರು ಈ ದುರ್ಘಟನೆ ನಡೆದ ದಿನವೇ ಇನ್ನು ಮುಂದಕ್ಕೆ ಇಂತಹ ದುರ್ಘಟನೆ ನಡೆಯದಂತೆ ಸುರಕ್ಷತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಡಿ.ಸಿ.ಸಿ ಉಪಾಧÀ್ಯಕ್ಷ ಪೆಮ್ಮಂಡ ಪೊನ್ನಪ್ಪ, ಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಗ್ರಾ.ಪಂ ಸದಸ್ಯ ಚಂಗುಲಂಡ ಸೂರಜ್ ಮತ್ತಿತರÀರು ಹಾಜರಿದ್ದರು.