ಗೋಣಿಕೊಪ್ಪಲು, ಜು. 2: ಮಳೆಗಾಲಕ್ಕೂ ಮುನ್ನ ಲೋಕೋಪಯೋಗಿ ಇಲಾಖೆಯು ಮಳೆನೀರು ರಸ್ತೆಯ ಮೇಲೆ ಹರಿಯದಂತೆ ಇಕ್ಕೆಲಗಳಲ್ಲಿಯೂ ಚರಂಡಿ ತೆಗೆಯುವದು, ರಸ್ತೆಯಲ್ಲಿ ಹೊಂಡಗಳಿದ್ದರೆ ಮುಚ್ಚುವದು ಸಾಮಾನ್ಯ. ಆದರೆ, ಬಾಳೆಲೆ ಪಟ್ಟಣದಲ್ಲಿಯೇ ರಸ್ತೆಗಳು ಹೊಂಡಗಳಾಗಿ ಕೆರೆಯಂತೆ ನೀರು ನಿಂತಿದೆ. ಇದರಿಂದಾಗಿ ಪಾದಚಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದಾಡುವದೇ ಪ್ರಯಾಸದ ಕೆಲಸವಾಗಿದೆ. ಈ ಬಗ್ಗೆ ದಿನನಿತ್ಯ ಪಿಡಬ್ಲ್ಯುಡಿ ಇಲಾಖೆಯ ವಿರುದ್ಧ ಇಲ್ಲಿ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗುತ್ತಿದೆ.

ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತವೆ. ವೀರಾಜಪೇಟೆ-ಗೋಣಿಕೊಪ್ಪಲು-ಬಾಳೆಲೆ-ಮೂರ್ಕಲ್ಲು ಮಾರ್ಗ ಹಾಗೂ ತಿತಿಮತಿ-ಕೋಣನಕಟ್ಟೆ-ಬಾಳೆಲೆ ಮಾರ್ಗ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹತ್ತಿರದಾರಿ ಇದಾಗಿದ್ದು, ಹಲವು ಸರ್ಕಾರಿ ಬಸ್ಸುಗಳೂ ಹೆಚ್.ಡಿ. ಕೋಟೆ- ಮೂರ್ಕಲ್ಲು ಬಾಳೆಲೆಯನ್ನು ದಿನನಿತ್ಯ ಸಂಪರ್ಕಿಸುತ್ತದೆ. ಹೆಚ್.ಡಿ. ಕೋಟೆ ಕಡೆಗಳಿಂದ ಕಾಫಿ ತೋಟ ಕಾರ್ಮಿಕರು ಈ ಮಾರ್ಗದಿಂದಲೇ ದಕ್ಷಿಣ ಕೊಡಗಿಗೆ ಬರುತ್ತಾರೆ.

ಈ ಹಿಂದೆ ಗೋಣಿಕೊಪ್ಪಲು-ಚೆನ್ನಂಗೊಲ್ಲಿ-ಕೋಣನಕಟ್ಟೆ ಮಾರ್ಗ ಬಾಳೆಲೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿತ್ತಾದರೂ ಇದೀಗ ಇಲಾಖೆಯ ಸೂಕ್ತ ನಿರ್ವಹಣೆ ಇಲ್ಲದೆ ರಸ್ತೆಯೂ ಅಲ್ಲಲ್ಲಿ ಭಾರೀ ಹೊಂಡಗಳಾಗಿ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಮಾಯಮುಡಿ, ಪೆÇನ್ನಪ್ಪಸಂತೆ, ಸುಳುಗೋಡುವಿನಲ್ಲಿ ಲೋಕೋಪಯೋಗಿ ರಸ್ತೆ ತೀವ್ರ ಹದಗೆಟ್ಟಿದೆ.

ವಾಹನ ವೇಗವಾಗಿ ಚಲಾಯಿಸಿದ ಸಂದರ್ಭ ಹೊಂಡದ ನೀರು ಪಾದಾಚಾರಿ ಮೈ ಮೇಲೆಲ್ಲಾ ಓಕುಳಿಯಾಡುವದು ಸಾಮಾನ್ಯ. ಇಲ್ಲಿನ ವಿಜಯಲಕ್ಷ್ಮೀ ಕಾಲೇಜು ಮುಂಭಾಗ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಆದರೆ. ಅದೂ ಅಪೂರ್ಣವಾಗಿದೆ.

ಕಾಂಕ್ರೀಟ್ ರಸ್ತೆಯ ಇಬ್ಬದಿ ಫುಟ್‍ಪಾತ್ ಡಾಂಬರೀಕರಣ ಮಾಡಬೇಕಿದ್ದರೂ, ಮತ್ತೊಂದು ಬದಿಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಸದರಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ವರ್ಷ ಕಳೆಯದಿದ್ದರೂ ಅಲ್ಲಲ್ಲಿ ಕಿತ್ತು ಬಂದು, ಅದರಲ್ಲಿಯೂ ಮಳೆಯ ನೀರು ನಿಲ್ಲುತ್ತಿರುವದಾಗಿ ಹಲವು ಸಾರ್ವಜನಿಕರು ‘ಶಕ್ತಿ’ಯೊಂದಿಗೆ ಆರೋಪಿಸಿದ್ದಾರೆ.

ಇಲ್ಲಿನ ಕಾಂಕ್ರೀಟ್ ರಸ್ತೆ ವಿಜಯ ಬ್ಯಾಂಕ್‍ವರೆಗೂ ಅಭಿವೃದ್ಧಿ ಪಡಿಸಬೇಕಿದ್ದು, ಇದೀಗ ಸ್ಥಗಿತಗೊಂಡಿರುವದರಿಂದ ಕನಿಷ್ಟ ಮುಖ್ಯರಸ್ತೆಯ ಹೊಂಡಗಳನ್ನು ಮುಚ್ಚಿ ಸಾರ್ವಜನಿಕರಿಗಾಗುವ ಅನಾನುಕೂಲಗಳನ್ನು ತಡೆಗಟ್ಟಲು ಇಲಾಖೆಗೆ ಅವಕಾಶವಿತ್ತು.

ಈ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ಎಚ್ಚೆತ್ತುಕೊಂಡು, ತುರ್ತು ಸ್ಪಂದಿಸಿ ರಸ್ತೆಯ ಹೊಂಡವನ್ನು ಮುಚ್ಚುವಂತೆಯೂ ಇಲ್ಲವೇ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಲಾಗುವದೆಂದು ಬಾಳೆಲೆ ಮಾಜಿ ಗ್ರಾ.ಪಂ. ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ತಿಳಿಸಿದ್ದಾರೆ.

- ಟಿ.ಎಲ್. ಶ್ರೀನಿವಾಸ್