ಮಡಿಕೇರಿ, ಜು. 2: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ನೆಹರೂ ಯುವ ಕೇಂದ್ರ, ಗ್ರೀನ್ ಸಿಟಿ ಫೋರಂ, ರೋಟರಿ ಕ್ಲಬ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ಓಡಿಪಿ ಸಂಸ್ಥೆ, ತಾಲೂಕು ಯುವ ಒಕ್ಕೂಟ, ಅರಣ್ಯ ಇಲಾಖೆ, ಮಡಿಕೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಕಾರ್ನರ್ ಫ್ರೆಂಡ್ಸ್, ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳು ಮತ್ತು ವಿವಿಧ ಸಂಘ-ಸಂಸ್ಥೆಗಳು ಕಡಗದಾಳು ಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವದ ಅಂಗವಾಗಿ ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪವನೇಶ್ ಡಿ. ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಮ್ಮ ಸಂವಿಧಾನದ 51(ಎ) ಅಡಿಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯಗಳಲ್ಲಿ ಒಂದಾಗಿದೆ. ಈ ಬಗ್ಗೆ ನಾವುಗಳು ಕಾಳಜಿ ತೋರಬೇಕಾಗುತ್ತದೆ. ಕಾನೂನಿಂದಲೇ ಇದೆಲ್ಲವನ್ನೂ ರಕ್ಷಿಸಲು ಸಾಧ್ಯವಿಲ್ಲ. ಅನುಷ್ಠಾನಗೊಳ್ಳಲು ಎಲ್ಲರೂ ಸಹಕರಿಸಬೇಕು ಎಂದರು.

ಗಿಡ ನೆಡುವದು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನವೂ ಪಾಲಿಸುವಂತಾಗಬೇಕು. ಪರಿಸರದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎಂದರು. ವಕೀಲರ ಸಂಘದ ಕಾರ್ಯದರ್ಶಿ ಪಿ.ಯು. ಪ್ರೀತಂ ಮಾತನಾಡಿ, ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ. ಪ್ರವಾಸಿಗರಿಗೆ, ಮಕ್ಕಳಿಗೆ ವಿವಿಧ ಸಸಿಗಳ ಬೀಜಗಳನ್ನೊಳಗೊಂಡ ಮಣ್ಣಿನಿಂದ ಮಾಡಿದ ಚೆಂಡುಗಳನ್ನು ನೀಡಿ ಅವರು ಅದನ್ನು ಎಲ್ಲೆಂದರಲ್ಲಿ ಬಿಸಾಡಿದಾಗ ಅಲ್ಲಿ ಪ್ರಾಕೃತಿಕವಾಗಿ ಸಸಿ ಹುಟ್ಟುವಂತಹ ವ್ಯವಸ್ಥೆಯ ಬಗ್ಗೆ ತಿಳಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ಎಂ.ಪಿ. ತಿಮ್ಮಯ್ಯ ಮಾತನಾಡಿ, ನಾವು ಇಂದು ಆಧುನಿಕತೆಯ ನೆಪ ಹೇಳಿ ವಿಷಯುಕ್ತ ಗಾಳಿ, ಪರಿಸರದಲ್ಲಿ ಜೀವಿಸುವಂತಾಗಿದೆ. ಇದು ಕೇವಲ ಸಂಬಂಧಿಸಿದ ಇಲಾಖೆಗಳಿಗೆ ಮಾತ್ರ ಸಂಬಂಧಿಸಿದಲ್ಲ. ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಂಗಮ್ಮ ಅವರು ಮನುಷ್ಯ ಸ್ವಾರ್ಥಕ್ಕಾಗಿ ಇಂದು ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಆದ್ದರಿಂದ ನಾವೀಗ ಹವಾಮಾನ ವೈಪರೀತ್ಯ ಕಾಣುವಂತಾಗಿದೆ ಎಂದರು. ವೇದಿಕೆಯಲ್ಲಿ ಗ್ರೀನ್ ಸಿ.ಟಿ. ಫೋರಂನ ರತನ್ ತಮ್ಮಯ್ಯ, ಅರಣ್ಯ ಅಧಿಕಾರಿ ವಿನುತಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನೀಲಮ್ಮ, ಯುವ ಸಂಘದ ಅಧ್ಯಕ್ಷ ಕೆ. ಬಾಲನ್, ಓಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್, ಟಿ.ಆರ್. ವಾಸು, ಬಿ.ಡಿ. ನಾರಾಯಣ ರೈ, ಎಂ.ಎಸ್. ಯೂಸಫ್, ಜಲೀಲ್, ರಮೇಶ ರೈ, ಗೀತಾ ರಮೇಶ, ರಮೇಶ ಆಚಾರಿ, ಕೆ. ಅಯ್ಯಪ್ಪ ಕೊರವಂಡ ಮಾಚಯ್ಯ ಇದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜಯಪ್ಪ ಸ್ವಾಗತಿಸಿ, ನಿರೂಪಿಸಿದರು. ಜಾಯ್ಸ್ ಮೆನೇಜಸ್ ವಂದಿಸಿದರು. ಇದಾದ ನಂತರ ಶಾಲೆ ದೇವಸ್ಥಾನ, ಮಸೀದಿ ಮತ್ತು ರಸ್ತೆಯ ಬದಿಗಳಲ್ಲಿ ಗಿಡ ನೆಡಲಾಯಿತು.