ಕೂಡಿಗೆ, ಜು. 3: ಯಡವನಾಡು ಪ್ರದೇಶದ ವ್ಯಾಪ್ತಿ ಸ್ವಲ್ಪ ಮಟ್ಟಿಗೆ ವಿಸ್ತಾರಗೊಂಡು ಹಾರಂಗಿ ಜಲಾಶಯದ ಸಮೀಪದ ವಿದ್ಯುತ್ ಉತ್ಪಾದನಾ ಘಟಕದವರೆಗೆ ಕೆಲವು ಕುಟುಂಬಗಳು ವಾಸವಾಗಿದ್ದು, ಈ ಕುಟುಂಬಗಳ ಮಕ್ಕಳು ಶಾಲಾ- ಕಾಲೇಜುಗಳಿಗೆ ಹೋಗಬೇಕಾದರೆ 2-3 ಕಿ.ಮೀ.ಗಳ ವರೆಗೆ ನಡೆದೆ ಹೋಗಬೇಕು. ಓಡಾಟಕ್ಕೆ ಯೋಗ್ಯವಲ್ಲದ ರಸ್ತೆಯಲ್ಲಿ ವಿದ್ಯಾರ್ಥಿಗಳು ದಿನನಿತ್ಯ ತೆರಳಬೇಕಾಗಿದೆ.

ಈ ಹಿನೆÀ್ನಲೆಯಲ್ಲಿ ಯಡವನಾಡು ಗ್ರಾಮದ ಕಡೆಯಿಂದ ಕೂಡಿಗೆ, ಕುಶಾಲನಗರ ಕಡೆಗೆ ಬರುವ ರಸ್ತೆ ಈಗಾಗಲೇ ಮಳೆಗೆ ಮತ್ತಷ್ಟು ಹಾಳಾಗಿದೆ. ಈ ಎಲ್ಲಾ ರಸ್ತೆಗಳ ನಿರ್ವಹಣೆ ಹಾರಂಗಿ ಜಲಾಶಯದ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಸೇರುತ್ತದೆ. ಆದ್ದರಿಂದ ಯಡವನಾಡು ಭಾಗದ ಗ್ರಾಮಸ್ಥರು ಮಕ್ಕಳ ಒಡಾಟಕ್ಕೆ ಆಗುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದವರಿಗೆ ತಿಳಿಸಿದರೂ, ಯಾವದೇ ಸ್ಪಂದನೆ ದೊರೆತಿಲ್ಲ. ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಸ್ಥಳದಿಂದ ಯಡವನಾಡಿಗೆ ಮಣ್ಣು ರಸ್ತೆ ಇದ್ದು ಇದರ ದುರಸ್ತಿ ಕಾರ್ಯವನ್ನು ನೀರಾವರಿ ಇಲಾಖೆ ಮಾಡದ ಬಗ್ಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯನ್ನು ಕೂಡಲೆ ಸರಿಪಡಿಸದಿದ್ದರೆ ಹಾರಂಗಿ ಜಲಾಶಯದ ನೀರಾವರಿ ಇಲಾಖೆ ಕಛೇರಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ನೆರವಿನೊಂದಿಗೆ ಪ್ರತಿಭಟಿಸಲಾಗುವದು ಎಂದು ಅವರು ತಿಳಿಸಿದ್ದಾರೆ.