ಮಡಿಕೇರಿ, ಜು. 3: ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಗು ಜಿಲ್ಲಾಡಳಿತದ ಮೂಲಕ ಕೊಡಗು ಜಿಲ್ಲಾ ರೈತ ಸಂಘ ಮನವಿ ಸಲ್ಲಿಸಿದೆ. ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರನ್ನು ಭೇಟಿ ಮಾಡಿದ ರೈತ ಮುಖಂಡರುಗಳು ಮನವಿ ಸಲ್ಲಿಸಿ, ಈಗಾಗಲೇ ರಾಜ್ಯ ಸರ್ಕಾರ ಸಹಕಾರಿ ಸಂಘಗಳ 50 ಸಾವಿರ ರೂಪಾಯಿಗಳನ್ನು ಮನ್ನಾ ಮಾಡಿದೆ. ಮುಂದೆ ಯಾವದೇ ಷರತ್ತುಗಳಿಲ್ಲದೆ ಸಹಕಾರಿ ಕ್ಷೇತ್ರಗಳ ರೈತರ, ಮಹಿಳಾ ಸ್ವ-ಸಹಾಯ ಸಂಘಗಳ ಎಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಅಲ್ಲದೆ ಕೇಂದ್ರ ಸರ್ಕಾರವು ಕೂಡ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಹಕ್ಕೊತ್ತಾಯಗಳು

ಬೆಳೆ ವಿಮೆ,ಬರಗಾಲ ಪರಿಹಾರದ ಮೊತ್ತವನ್ನು ವೈಜ್ಞಾನಿಕ ಕ್ರಮ ಕೈಗೊಂಡು ರೈತರಿಗೆ ತಲಪಿಸುವದು, ರಾಜ್ಯ ಸರ್ಕಾರದ ಎಲ್ಲಾ ಸಹಕಾರಿ ಕ್ಷೇತ್ರಗಳ ಸಂಪೂರ್ಣ ಸಾಲವನ್ನು ಯಾವದೇ ಷರತ್ತುಗಳಿಲ್ಲದೆ ಮನ್ನಾ ಮಾಡುವದು, ಜೂನ್ 10ರ ಒಳಗಿನ ತೊಗರಿ ಖರೀದಿ ಕೇಂದ್ರದಲ್ಲಿನ ಉಳಿದ ತೊಗರಿಗಳನ್ನು ಖರೀದಿಸುವದು ಮತ್ತು ಶೀಘ್ರವೆ ರೈತನಿಗೆ ಹಣ ಪಾವತಿಸುವದು. ನಕಲಿ ಬೀಜ, ಕ್ರಿಮಿನಾಶಕ, ಗೊಬ್ಬರ ತಡೆಗಟ್ಟುವದು, ಮತ್ತು ಬೆಳೆ ಬೆಳೆಯಲು ಅಗತ್ಯ ಕ್ರಮಕೈಗೊಂಡು ಕೃಷಿ ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ರೈತನಿಗೂ ತಲಪುವಂತೆ ಮಾಡಬೇಕೆಂಬ ಹಕ್ಕೊತ್ತಾಯಗಳನ್ನು ಮಾಡಲಾಯಿತು.

ಜಿಲ್ಲಾಧಿಕಾರಿಗಳ ಭೇಟಿಯ ಸಂದರ್ಭ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಖಜಾಂಚಿ ಚೋನಿರ ಕೆ.ಸತ್ಯ. ಸಂಚಾಲಕ ಚಿಮ್ಮಂಗಡ ಗಣೇಶ್ ಸದಸ್ಯರಾದ ಬಾಚಮಾಡ ಭವಿ, ಮಚ್ಚಾಮಾಡ ರಂಜಿ, ಐಯ್ಯಮಾಡ ಹ್ಯಾರಿ ಸೋಮೇಶ್, ಸುನೀಲ್ ಬೋಪಣ್ಣ ಮುಂತಾದವರು ಉಪಸ್ಥಿತರಿದ್ದರು.