ಸೋಮವಾರಪೇಟೆ, ಜು. 3: ಪ್ರಕೃತಿಯ ತವರು ಕೊಡಗು ಸೇರಿದಂತೆ ರಾಜ್ಯದ ಹಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ನಡೆದಿರುವ ಕ್ರಮಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವಾಗಿದ್ದು, ಈ ಘೋಷಣೆ ಅನುಷ್ಠಾನಕ್ಕೂ ಮೊದಲು ರಾಜ್ಯ ಸರ್ಕಾರ ಮತ್ತೊಮ್ಮೆ ಹಸಿರು ಪೀಠದ ಎದುರು ಸಮಯಾವಕಾಶ ಕೋರಬೇಕು. ನಂತರ ಕೇರಳ ಮಾದರಿಯ ವರದಿಯನ್ನು ಸಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಸಿ.ಟಿ. ರವಿ ಸರ್ಕಾರವನ್ನು ಆಗ್ರಹಿಸಿದರು.ಪಕ್ಷ ಸಂಘಟನೆ ಕಾರ್ಯ ನಿಮಿತ್ತ ಜಿಲ್ಲೆಗೆ ಭೇಟಿ ನೀಡಿರುವ ಸಿ.ಟಿ. ರವಿ ಅವರು ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಿದರು.

ಕಸ್ತೂರಿ ರಂಗನ್ ವರದಿಯ ಆಧಾರದ ಮೇರೆ ಸೂಕ್ಷ್ಮ ಪರಿಸರ ತಾಣ ಘೋಷಣೆಗೆ ಮುಂದಾಗಿರುವ ಕ್ರಮದ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯತೆ ಅಡಗಿದೆ. ಸರ್ಕಾರದ ಎಡವಟ್ಟಿನಿಂದ ಜನತೆಯ ಮೇಲೆ

(ಮೊದಲ ಪುಟದಿಂದ) ತೂಗುಕತ್ತಿ ನೇತಾಡುವಂತಾಗಿದೆ. ಪರಿಸರವೂ ಉಳಿಯಬೇಕು;ರೈತರೂ ಬದುಕಬೇಕು ಎಂಬ ಬದ್ಧತೆ ಬಿಜೆಪಿಗಿದ್ದು, ಈಗಾಗಲೇ ಪಕ್ಷದ ವತಿಯಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ಜನಜೀವನ ಮತ್ತು ಪರಿಸರ ರಕ್ಷಣೆಯ ನಡುವೆ ಸಮತೋಲನ ಮೂಡಿಸುವ ಕಾರ್ಯ ಆಗಬೇಕಿದೆ. ಸೂಕ್ಷ್ಮ ಪರಿಸರ ತಾಣ ಒಂದೆರಡು ದಿನದಲ್ಲಿ ಆದದ್ದಲ್ಲ. ಕೇಂದ್ರ ಸರ್ಕಾರವೂ ಸಹ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಸಮಯಾವಕಾಶ ನೀಡಿತ್ತು. ಈ ಸಂದರ್ಭ ಪ್ರತಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಭೌತಿಕ ವರದಿ ತಯಾರಿಸಿ ಕೇಂದ್ರಕ್ಕೆ ಕಳುಹಿಸಬೇಕಿತ್ತು. ಈ ಹಿಂದೆ ನೀಡಿದ್ದ ಅವಧಿ ಮುಕ್ತಾಯಗೊಂಡ ನಂತರ ಬಿಜೆಪಿ ಪಕ್ಷ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚುವರಿ ಸಮಯ ಕೇಳಿದ್ದರಿಂದ ಕೇಂದ್ರ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಈ ಅವಧಿಯಲ್ಲೂ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸದೇ ವಾಸ್ತವ ವರದಿ ನೀಡಲು ವಿಫಲವಾದ್ದರಿಂದ ಇಂತಹ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸಿ.ಟಿ. ರವಿ ಆರೋಪಿಸಿದರು.

ಕೇರಳದಲ್ಲಿ ಬಿಜೆಪಿಯ ನೆಲೆ ಗಟ್ಟಿಯಾಗಿಲ್ಲದಿದ್ದರೂ ಕೇಂದ್ರ ಸರ್ಕಾರ ಆ ರಾಜ್ಯದ ವಾಸ್ತವ ವರದಿಯ ಮೇಲೆ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿದ್ದರೂ ಸಹ ಸರ್ಕಾರದ ಎಡವಟ್ಟಿನಿಂದ ಪರಿಸರ ತಾಣ ಘೋಷಣೆಯಾಗುತ್ತಿದೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿಲ್ಲ. ಒಂದು ವೇಳೆ ಅನುಸರಿಸಿದ್ದೇ ಆದಲ್ಲಿ ಕೇರಳದ ವರದಿಗೆ ಮಾನ್ಯತೆ ನೀಡುತ್ತಿರಲಿಲ್ಲ. ಇದರಲ್ಲಿ ರಾಜ್ಯ ಸರ್ಕಾರದ ಎಡವಟ್ಟು ಎದ್ದುಕಾಣುತ್ತಿದೆ. ಕಾಂಗ್ರೆಸ್ಸಿಗರು ಇದೀಗ ಕೇಂದ್ರದ ಮೇಲೆ ಬೆರಳು ತೋರುತ್ತಿರುವದರಲ್ಲಿ ಅರ್ಥವೇ ಇಲ್ಲ ಎಂದರು.

ಈಗಲಾದರೂ ಕಾಂಗ್ರೆಸ್ ಸರ್ಕಾರ ಹಸಿರು ಪೀಠದ ಎದುರು ಮನವಿ ಸಲ್ಲಿಸಿ ಮತ್ತೊಮ್ಮೆ ಕಾಲಾವಕಾಶ ಕೋರಬೇಕು. ಕೇರಳ ಸರ್ಕಾರ ಸಲ್ಲಿಸಿದ ಮಾದರಿಯಲ್ಲೇ ವರದಿ ನೀಡಬೇಕು. ಈಗಿರುವ ಅರಣ್ಯಗಳನ್ನು ಹಾಗೆಯೇ ಉಳಿಸಿಕೊಳ್ಳುವ ವಾಗ್ದಾನ ನೀಡಬೇಕು. ಅದಕ್ಕೂ ಮುಂಚೆ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಸಿ.ಟಿ. ರವಿ ಆಗ್ರಹಿಸಿದರು.

ಸಾಲ ಮನ್ನಾ ಮೂಲಕ ಸರ್ಕಾರ ರೈತರನ್ನು ಒಡೆದು ಆಳುವ ಪ್ರಯತ್ನ ನಡೆಸುತ್ತಿದೆ. ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡುವ ಬದಲು ಸಹಕಾರ ಸಂಘಗಳ ಸಾಲವನ್ನು 50 ಸಾವಿರದಷ್ಟು ಮಾತ್ರ ಮನ್ನಾ ಮಾಡಿದೆ. ಮಹಾರಾಷ್ಟ್ರದಲ್ಲಿ ಒಂದೂವರೆ ಲಕ್ಷ, ಪಂಜಾಬ್‍ನಲ್ಲಿ 2 ಲಕ್ಷ, ಉತ್ತರ ಪ್ರದೇಶದಲ್ಲಿ ತಲಾ 1ಲಕ್ಷ ಸಾಲವನ್ನು ಮನ್ನಾ ಮಾಡಿದ್ದು, ಎಲ್ಲವುಗಳಿಗಿಂತ ಆದಾಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಸರ್ಕಾರ ಕೇವಲ 50 ಸಾವಿರ ಮಾತ್ರ ಮನ್ನಾ ಮಾಡುವ ಮೂಲಕ ರಾಜಕೀಯ ಮಾಡಲು ಹೊರಟಿದೆ ಎಂದು ದೂರಿದರು.

ಇಡೀ ದೇಶದಲ್ಲೇ ಬರಗಾಲವಿದ್ದಿದ್ದರೆ ಕೇಂದ್ರ ಸರ್ಕಾರವನ್ನು ಸಾಲಮನ್ನಾಕ್ಕೆ ಆಗ್ರಹಿಸಬಹುದಿತ್ತು. ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಬರಗಾಲವಿದ್ದಿದ್ದರೆ ಇಡೀ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲು ಸಿದ್ದರಾಮಯ್ಯ ಮುಂದಾಗುತ್ತಿದ್ದರೇ? ಇದೀಗ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾಕ್ಕೆ ಕೇಂದ್ರವನ್ನು ಕಾಂಗ್ರೆಸ್ ಆಗ್ರಹಿಸುತ್ತಿರುವದರಲ್ಲಿ ಅರ್ಥವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಮಜಾಯಿಷಿಕೆ ನೀಡಿದರು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ರೈತರು 1.75 ಕೋಟಿ ವಿಮಾ ಹಣ ನೀಡಿದ್ದು, ಯೋಜನೆಯಡಿ ಇದೀಗ ಜಿಲ್ಲೆಯ ರೈತರಿಗೆ 38 ಕೋಟಿ ಪರಿಹಾರ ಧನ ಬಿಡುಗಡೆಯಾಗಿದೆ. ರಸಗೊಬ್ಬರದ ಬೆಲೆ ಇಳಿಕೆ, ಬಡವರ ಮನೆಗೆ ಉಚಿತ ಸಿಲಿಂಡರ್ ಸಂಪರ್ಕ, 1 ರೂಪಾಯಿಗೆ ಜೀವ ವಿಮೆ ಕಾಂಗ್ರೆಸ್ ಸರ್ಕಾರ ಮಾಡಿದ್ದಲ್ಲ; ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ್ದು, ಕೇಂದ್ರ ಸರ್ಕಾರ ರೈತರ ಪರ ಇದ್ದು, ಕಾಂಗ್ರೆಸ್ ವೃಥಾ ಆರೋಪ ಮಾಡುತ್ತಿದೆ ಎಂದು ರವಿ ಅಭಿಪ್ರಾಯಿಸಿದರು.

ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ನಿಜವಾದ ಕಾಳಜಿಯಿದ್ದರೆ ತೋಟಗಾರಿಕಾ ಬೆಳೆಗಳಿಗೆ ವಿಶೇಷ ಪ್ಯಾಕೇಜ್ ನೀಡಲಿ. ತೆಂಗು, ಅಡಿಕೆ, ದಾಳಿಂಬೆ ಸೇರಿದಂತೆ ಕಾಫಿ ಬೆಳೆಗೆ ಅನುದಾನ ಒದಗಿಸಲಿ. ಬೋರರ್ ರೋಗದಿಂದ ಕಾಫಿ ಗಿಡಗಳನ್ನು ಉಳಿಸಿಕೊಳ್ಳಲೂ ಸಹ ಬೆಳೆಗಾರರು ಕಷ್ಟಪಡುತ್ತಿದ್ದು, ಇವರನ್ನು ಮೇಲೆತ್ತಲು ಸರ್ಕಾರ ವಿಶೇಷ ಪ್ಯಾಕೇಜ್ ನೀಡಲಿ ಎಂದು ಅವರು ಆಗ್ರಹಿಸಿದರು.

ಈ ಸಂದರ್ಭ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಜಿ.ಪಂ. ಮಾಜೀ ಅಧ್ಯಕ್ಷ ಶಿವಪ್ಪ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮುಖಂಡರಾದ ಹಾಲಪ್ಪ ಶೆಟ್ಟಿ, ಮೋಹನ್‍ದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.