ಸುಂಟಿಕೊಪ್ಪ, ಜು. 4: ಕಾಡಾನೆಗಳ ಹಿಂಡು ಉಲುಗುಲಿ ಗ್ರಾಮದ ತಾ. ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ತೋಟದಲ್ಲಿ ಬೀಡುಬಿಟ್ಟಿದ್ದು, ಇಲಾಖೆ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಕ್ರಮಕೈಗೊಂಡಿದ್ದಾರೆ.ಸೋಮವಾರÀ ಮಧ್ಯರಾತ್ರಿ ಉಲುಗುಲಿ ಗ್ರಾಮದ ಭಾಗಕ್ಕೆ ಆಹಾರ ಅರಸಿ ಆಗಮಿಸಿದ್ದ ಕಾಡಾನೆಗಳು ಕಾಡಿಗೆ ಹಿಂತೆರಳದೆ ತೋಟದಲ್ಲಿಯೇ ವಾಸ್ತವ್ಯ ಹೂಡಿದ್ದವು. ತೋಟದಲ್ಲಿದ್ದ ತೆಂಗು, ಬಾಳೆ, ಕಾಫಿ ಗಿಡಗಳನ್ನು ಧ್ವಂಸಗೊಳಿಸಿದ್ದು, ನಷ್ಟ ಸಂಭವಿಸಿದೆ. ಈ ಬಗ್ಗೆ ತೋಟದ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ವಲಯ ಅರಣ್ಯ ಅಧಿಕಾರಿ ರಂಜಿತ್ ಮತ್ತು ಸಿಬ್ಬಂದಿಗಳು ಕಾಡಾನೆಗಳ ಇರುವಿಕೆಯನ್ನು ಮನದಟ್ಟು ಮಾಡಿಕೊಂಡು ಕಾರ್ಯಾಚರಣೆಗೆ ಇಳಿದ ಸಂದರ್ಭ 3 ಕಾಡಾನೆಗಳ ಹಿಂಡು ತಂಗಿರುವದು ಕಂಡು ಬಂದಿದ್ದು, ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಕೈಗೊಂಡು ಸ್ಥಳದಿಂದ ಓಡಿಸಲಾಯಿತು. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಕೃಷಿ ಫಲಸನ್ನು ತಿಂದು ಧ್ವಂಸಗೊಳಿಸುತ್ತಿದ್ದು, ನಷ್ಟ ಉಂಟಾಗಿರುವ ಬಗ್ಗೆ ಸ್ಥಳೀಯ ಕೃಷಿಕರು ಈ ಸಂದರ್ಭ ಅಳಲು ತೋಡಿಕೊಂಡಿದ್ದಾರೆ.