ಕೂಡಿಗೆ, ಜು. 4: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪ ಹಾರಂಗಿ ಮುಖ್ಯ ನಾಲೆಗೆ ಅಡ್ಡಲಾಗಿ ಸೀಗೆಹೊಸೂರು ಮಾರ್ಗವಾಗಿ ಸೋಮವಾರಪೇಟೆ ಹಾಗೂ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 40 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸೇತುವೆಯ ಸಮರ್ಪಕ ನಿರ್ವಹಣೆ ಇಲ್ಲದೆ, ಇದೀಗ ಕುಸಿಯುವ ಹಂತ ತಲಪಿದೆ. ಈ ಭಾಗಗಳಲ್ಲಿ ಕಲ್ಲು ಕೋರೆಗಳಿದ್ದು ಅಧಿಕ ವಾಹನಗಳು ಚಲಿಸುತ್ತವೆ. ಲಾರಿಗಳು ಕಡಿಮೆ ಸಾಮಥ್ರ್ಯದ ಕಲ್ಲುತುಂಬಿಸಿ ಚಲಿಸುವಂತೆ ನಿಯಮವಿದ್ದರೂ ಅಧಿಕವಾಗಿ ಕಲ್ಲು ತುಂಬಿಸಿ ಲಾರಿಗಳು ಈ ಸೇತುವೆಯ ಮಾರ್ಗವಾಗಿಯೇ ಚಲಿಸುವದರಿಂದ ಸೇತುವೆಯು ಅಲ್ಲಲ್ಲಿ ಬಿರುಕುಬಿಟ್ಟಿದ್ದು, ಇದೀಗ ಸಮರ್ಪಕ ನಿರ್ವಹಣೆ ಇಲ್ಲದೆ ಕುಸಿದು ಬೀಳುವಂತಿದೆ. ಅಲ್ಲದೆ, ಸೋಮವಾರಪೇಟೆಗೆ ಹತ್ತಿರವಾದ ಮಾರ್ಗವಾಗಿದೆ. ಕೂಡಿಗೆ ಕುಶಾಲನಗರ ಸಂಪರ್ಕಕ್ಕೂ ಆ ಭಾಗದ ಜನರು ಈ ಸೇತುವೆಯ ಮಾರ್ಗವಾಗಿಯೇ ಬರಬೇಕಾಗುತ್ತದೆ. ಸೇತುವೆಯು ಕುಸಿದರೆ ಈ ಸಂಪರ್ಕ ಸೇತುವೆಯ ಸಂಪರ್ಕ ಕಡಿತಗೊಳ್ಳುತ್ತದೆ.

ಹಾರಂಗಿ ನಾಲೆಯಿಂದ ಹರಿಸುವ ನೀರು ಈ ನಾಲೆಯ ಮೂಲಕ ತುಂಬಿ ಹರಿಯುತ್ತಿರುತ್ತದೆ. ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಸಂಬಂಧಪಟ್ಟವರು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸೇತುವೆಯನ್ನು ಸರಿಪಡಿಸಬೇಕೆಂದು ಜಿಲ್ಲಾ ದಲಿತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಡಿ. ಅಣ್ಣಯ್ಯ, ಸಮಿತಿಯ ಸದಸ್ಯರು ಹಾಗೂ ಈ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.