ಮಡಿಕೇರಿ, ಜು. 4: ಕಳೆದ ವರ್ಷ ಜಿಲ್ಲೆಯಾದ್ಯಂತ ಮಳೆ ತೀವ್ರ ಇಳಿಮುಖಗೊಂಡು ಎಲ್ಲೆಡೆ ಬರದ ಛಾಯೆ ಮೂಡಿತ್ತು. ಕಾವೇರಿಯ ತವರಿನಲ್ಲಿ ತಲೆದೋರಿದ್ದ ಈ ಅನಾವೃಷ್ಟಿಯಿಂದಾಗಿ ಕಾವೇರಿ ನೀರನ್ನು ನಂಬಿದ್ದ ರಾಜ್ಯದ ಬಹುತೇಕ ಜಿಲ್ಲೆಗಳು ಕುಡಿಯಲು ಕೂಡ ನೀರಿಲ್ಲದೆ ಬರದಿಂದ ತತ್ತರಿಸಿದ್ದವು.ಆದರೆ ಪ್ರಸಕ್ತ ವರ್ಷ ಇದುವರೆಗಿನ ಮಳೆ ದಾಖಲಾತಿಯಂತೆ ಕಳೆದ ವರ್ಷಕ್ಕಿಂತ ಮಳೆಯ ಪ್ರಮಾಣ ಅಧಿಕಗೊಳ್ಳುತ್ತಾ ಬಂದಿದ್ದು, ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಆಶಾಭಾವನೆ ಮೂಡಿಸಿತ್ತು. ಇದ್ದಕ್ಕಿದ್ದಂತೆ ಪ್ರಸಕ್ತ ವರ್ಷವೂ ಮಳೆ ಕ್ಷೀಣಗೊಳ್ಳಲು ಪ್ರಾರಂಭಿಸಿದ್ದು, ಇಂದಿನ ದಾಖಲಾತಿ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದ್ರ್ರ ಮಳೆ ಆಶಾದಾಯಕವಾಗಿ ಮೂಡಿ ಬಂದಿದ್ದರೂ ಈ ನಕ್ಷತ್ರದ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ರಭಸ ಕಡಿಮೆಯಾಗುತ್ತಿದೆ. ಜಿಲ್ಲೆಯ ಅನೇಕ ಕಡೆ ಇಂದು ಬಿಸಿಲಿನ ವಾತಾವರಣ ಕಂಡು ಬಂದಿದೆ. ತಾ. 5ರ ಬಳಿಕ ಪುನರ್ವಸು ಪ್ರಾರಂಭಗೊಳ್ಳಲಿದ್ದು, ಮಳೆಯ ಪ್ರಮಾಣ

(ಮೊದಲ ಪುಟದಿಂದ) ಅಧಿಕಗೊಳ್ಳುವದೆ ಎಂಬದನ್ನು ಕಾದುನೋಡಬೇಕಾಗಿದೆ.

ಜಿಲ್ಲೆಯಲ್ಲಿ ಇದುವರೆಗಿನ ಸರಾಸರಿ ಮಳೆಯ ಪ್ರಮಾಣ 30.14 ಇಂಚುಗಳಾಗಿವೆ. ಕಳೆದ ವರ್ಷ ಇದೇ ಅವಧಿಗೆ 30.69 ಇಂಚು ಮಳೆಯಾಗಿದ್ದು, ಸುಮಾರು 16 ಮಿ.ಮೀ. ಮಳೆ ಕಡಿಮೆಯಾಗಿದ್ದು, ಪ್ರಥಮ ಬಾರಿಗೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಪ್ರಮಾಣ ಕಂಡು ಬಂದಿದೆ. ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 40.31 ಇಂಚು ಮಳೆಯಾಗಿದ್ದರೆ ಕಳೆದ ಸಾಲಿನಲ್ಲಿ 45.64 ಇಂಚು ಮಳೆಯಾಗಿದ್ದು, ಸುಮಾರು 5 ಇಂಚುಗಳಷ್ಟು ಕಡಿಮೆಯಾಗಿದೆ. ಆದರೆ ವೀರಾಜಪೇಟೆ ತಾಲೂಕಿನಲ್ಲಿ ಮಾತ್ರ ಪ್ರಸಕ್ತ ವರ್ಷ ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದ ಮಳೆಯಾಗಿರುವದು ವಿಶೇಷ. ಪ್ರಸಕ್ತ ಸಾಲಿನಲ್ಲಿ ವೀರಾಜಪೇಟೆ ತಾಲೂಕಿನಲ್ಲಿ 27.14 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 22.81 ಇಂಚು ಮಳೆಯಾಗಿದ್ದು, ಸುಮಾರು 5 ಇಂಚುಗಳಷ್ಟು ಅಧಿಕ ಪ್ರಮಾಣ ದಾಖಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಈ ವರ್ಷ 21.90 ಇಂಚು ಮಳೆಯಾಗಿದ್ದು, ಕಳೆದ ಸಾಲಿನಲ್ಲಿ 23.64 ಇಂಚು ಮಳೆಯಾಗಿತ್ತು.

ಇಂದು ಮಳೆ ದಿಢೀರಾಗಿ ಕುಸಿದಿದ್ದು, ಮಳೆಗಾಲವನ್ನೇ ಮರೆಸುವಂತಹ ಬಿಸಿಲಿನ ವಾತಾವರಣ ನೋಡಿದಾಗ ಮತ್ತೆ ಈ ವರ್ಷ ಜಿಲ್ಲೆ ಹಾಗೂ ರಾಜ್ಯದಲ್ಲಿ ಬರಗಾಲ ಎದುರಾಗುವ ಭೀತಿ ಕಂಡು ಬಂದಿದೆ. ಸಾಮಾನ್ಯವಾಗಿ ಮೇ ಹಾಗೂ ಜೂನ್‍ನಲ್ಲಿ ಮಳೆಯಾಗದಿದ್ದರೆ ಜುಲೈನಲ್ಲಿ ಅಧಿಕ ಮಳೆಯಾಗುತ್ತಿದ್ದು, ಇದೀಗ ಮಳೆಗಾಲ ಮುಕ್ತಾಯಗೊಂಡ ರೀತಿಯಲ್ಲಿ ಮೋಡ ಸರಿದು ಆಗಸದಲ್ಲಿ ಶುಭ್ರ ವಾತಾವರಣ ಗೋಚರವಾಗಿರುವದು ಭವಿಷ್ಯತ್‍ನಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ಪರದಾಡುವ ಸನ್ನಿವೇಶ ಬರಬಹುದು ಎನ್ನುವ ಲಕ್ಷಣ ಕಂಡು ಬಂದಿದೆ.

2015ಕ್ಕೆ ಹೋಲಿಸಿದರೆ, ಜಿಲ್ಲೆಯ ಮಳೆಯ ಪ್ರಮಾಣದಲ್ಲಿ ಸರಾಸರಿ ಶೇ. 14 ರಷ್ಟು ಇಳಿಮುಖ ಕಂಡು ಬಂದಿದೆ. ಜಿಲ್ಲೆಯಲ್ಲಿ 2015ರಲ್ಲಿ ಈ ಅವಧಿವರೆಗೆ ಸರಾಸರಿ 46.29 ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಅತ್ಯಧಿಕ ಅಂದರೆ 61.52 ಇಂಚು ಮಳೆಯಾಗಿದ್ದು, ಈ ವರ್ಷ 2015ಕ್ಕಿಂತ ಮಡಿಕೇರಿ ತಾಲೂಕಿನಲ್ಲಿ ಶೇ. 25 ರಷ್ಟು ಮಳೆ ಪ್ರಮಾಣ ಕುಸಿದಿದೆ. ವೀರಾಜಪೇಟೆ ತಾಲೂಕಿನಲ್ಲಿ 2015ರಲ್ಲಿ 44.41 ಇಂಚು ಮಳೆಯಾಗಿತ್ತು. ತಾಲೂಕಿನಲ್ಲಿ 2015ಕ್ಕೆ ಹೋಲಿಸಿದರೆ ಶೇ. 12 ರಷ್ಟು ಕಡಿಮೆ ಮಳೆ ಪ್ರಮಾಣ ಕಂಡು ಬಂದಿದೆ. ಸೋಮವಾರಪೇಟೆ ತಾಲೂಕಿನಲ್ಲಿ 2015ರಲ್ಲಿ 32.95 ಇಂಚು ಮಳೆಯಾಗಿತ್ತು. ಈ ಅಂಕಿ ಅಂಶಕ್ಕೆ ಹೋಲಿಸಿದೆ, ಶೇ. 7 ರಷ್ಟು ಮಳೆಯ ಪ್ರಮಾಣ ಕುಸಿದಿದೆ.