*ಗೋಣಿಕೊಪ್ಪಲು, ಜು. 4: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯಡಿ ಮಹಿಳೆಯರಿಗೆ ಅಡುಗೆ ಇಂಧನವನ್ನು ಸಂಸದ ಪ್ರತಾಪ್ ಸಿಂಹ ವಿತರಿಸಿದರು. ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 30 ಕ್ಕೂ ಹೆಚ್ಚು ಮಹಿಳೆಯರು ಇದರ ಫಲಾನುಭವಿಗಳಾಗಿದ್ದರು.ಗ್ಯಾಸ್ ಸಿಲಿಂಡರ್ ವಿತರಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಮಹಿಳೆಯರು ಸೌದೆ ಒಲೆಗಳಲ್ಲಿ ಅಡುಗೆ ಮಾಡುವದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಇದನ್ನು ತಪ್ಪಿಸಲು ಪ್ರಧಾನಿ ಮೋದಿ ಸರ್ಕಾರ ಉಜ್ವಲ ಯೋಜನೆಯಡಿ ಅಡುಗೆ ಅನಿಲಗಳನ್ನು ವಿತರಿಸುವ ಮೂಲಕ ಮಹಿಳೆಯರ ಸಂಕಷ್ಟಕ್ಕೆ ಸಹಕರಿಸುತ್ತಿದ್ದಾರೆ. ಈಗಾಗಲೇ ದೇಶದಲ್ಲಿ ಎರಡು ಕೋಟಿಗೂ ಹೆಚ್ಚು ಮಹಿಳೆಯರಿಗೆ ಅಡುಗೆ ಅನಿಲ ವಿತರಣೆಯಾಗಿದೆ. ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಕೇಂದ್ರ ಸರಕಾರ ಬಡವರ ಅಭಿವೃದ್ಧಿಗಾಗಿ ಪಣತೊಟ್ಟಿದೆ. ಈ ನಿಟ್ಟಿನಲ್ಲಿ ನಿವೇಶನ ರಹಿತರಿಗೆ ವಸತಿ ನೀಡಲು ಮುಂದಾಗಿದ್ದು ವಸತಿ ರಹಿತರು ಗ್ರಾಮ ಪಂಚಾಯಿತಿ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಜೊತೆಗೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸುರಕ್ಷಾ ವಿಮಾ ಯೋಜನೆಯನ್ನು ನೀಡಲಾಗುತ್ತಿದೆ. ಆಕಸ್ಮಿಕ ಗ್ಯಾಸ್ ಬಳಕೆಯಿಂದ ಸಾವು ಸಂಭವಿಸಿದರೆ 6 ಲಕ್ಷ ಮತ್ತು ದುರ್ಘಟನೆ ಸಂಭವಿಸಿದರೆ ರೂ. 1 ಲಕ್ಷ ತಕ್ಷಣ ಪರಿಹಾರವಾಗಿ ರೂ. 25 ಸಾವಿರ ವೈದ್ಯಕೀಯ ಪರಿಹಾರ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಸ್ಥಾನೀಯ ಸಮಿತಿ ಅಧ್ಯಕ್ಷ ಗಣೇಶ್, ಬಿ.ಜೆ.ಪಿ. ತಾಲೂಕು ಅಧಕ್ಷ ಕುಂಞಂಗಡ ಅರುಣ್ ಭೀಮಯ್ಯ, ವರ್ತಕರ ಪ್ರಕೋಷ್ಠ ಜಿಲ್ಲಾಧ್ಯಕ್ಷ ಕಡೇಮಾಡ ಗಿರೀಶ್ ಗಣಪತಿ, ತಾಲೂಕು ಫೆಡರಲ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್, ತಹಶೀಲ್ದಾರ್ ಗೋವಿಂದರಾಜು, ಪೆಟ್ರೋಲಿಯಂ ಮತ್ತು ಪ್ರಾಕೃತಿಕ ಅನಿಲ ಖಾತೆ ಮೈಸೂರು ಕೊಡಗು ವಿಭಾಗ ಅಧಿಕಾರಿ ಮಹೇಂದ್ರ ಡೋಂಗ್ರೆ ಉಪಸ್ಥಿತರಿದ್ದರು.

- ಎನ್.ಎನ್. ದಿನೇಶ್