ಸೋಮವಾರಪೇಟೆ, ಜು. 4: ಭಾರತೀಯ ಜನತಾ ಪಾರ್ಟಿ ರಾಜಕೀಯದಿಂದ ಅಧಿಕಾರ ಪಡೆಯಲು ಮಾತ್ರ ರೂಪಿತವಾಗಿಲ್ಲ. ಪಕ್ಷದ ಹಿಂದೆ ಸಿದ್ದಾಂತವಿದ್ದು, ಭಾರತವನ್ನು ವಿಶ್ವಗುರುವನ್ನಾಗಿಸುವ ಧ್ಯೇಯ ಸಾಧನೆಗಾಗಿ ಬಿಜೆಪಿ ಕಾರ್ಯೋನ್ಮುಖವಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಕೊಡಗು ಉಸ್ತುವಾರಿ ಸಿ.ಟಿ. ರವಿ ಹೇಳಿದರು.ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಸೋಮವಾರಪೇಟೆ ತಾಲೂಕು ಬಿಜೆಪಿ ಶಿಕ್ಷಕರ ಪ್ರಕೋಷ್ಠದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿ ಪಕ್ಷ ಅಧಿಕಾರಕ್ಕಾಗಿ ಮಾತ್ರ ಕೆಲಸ ಮಾಡುತ್ತಿಲ್ಲ. ಅಧಿಕಾರವೇ ನಮ್ಮ ಅಂತಿಮ ಗುರಿಯೂ ಅಲ್ಲ. ಭಾರತವನ್ನು ವಿಶ್ವಗುರು ಮಾಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕ್ರಮ ನಡೆಯುತ್ತಿದೆ. ಕುಟುಂಬವಾದಿ ಪಕ್ಷವೂ ಅಲ್ಲ; ಜಾತೀಯತೆಯ ಕಟ್ಟು ಪಾಡುಗಳಿಗೂ ಬಿಜೆಪಿ ಒಳಪಟ್ಟಿಲ್ಲ. ಕಾರ್ಯಕರ್ತರನ್ನೇ ಆಧಾರವಾಗಿಟ್ಟು ಕೊಂಡು ಮಹಾನ್ ಧ್ಯೇಯ ಸಾಧನೆಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಂದ ಸ್ಥಾಪಿಸಲ್ಪಟ್ಟ ಪಕ್ಷ ಬಿಜೆಪಿ ಎಂದು ಸಿ.ಟಿ. ರವಿ ಬಣ್ಣಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್‍ನಂತೆ ಬಿಜೆಪಿ ಕುಟುಂಬ ಮಾಲೀಕತ್ವದ ಪಕ್ಷವಲ್ಲ. ಜವಾಹರಲಾಲ್ ನೆಹರೂ ನಂತರ ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‍ಗಾಂಧಿಯಂತೆ ಒಂದೇ ಕುಟುಂಬದ ಆಸ್ತಿಯಾಗಿ ಪಕ್ಷ ಉಳಿದಿಲ್ಲ. ಜೆಡಿಎಸ್‍ನಂತೆಯೂ ಕೌಟುಂಬಿಕ ರಾಜಕಾರಣಕ್ಕೆ ಪಕ್ಷ ಒಳಗಾಗಲಿಲ್ಲ ಎಂದು ಇತರ ಪಕ್ಷಗಳತ್ತ ಬೊಟ್ಟು ಮಾಡಿದ ಸಿ.ಟಿ. ರವಿ ಸಮಾಜವಾದಿಯ ಹೆಸರಲ್ಲಿ ಅಧಿಕಾರಕ್ಕೆ ಬಂದು ಮಜಾವಾದಿಗಳಾಗಿ ಆಡಳಿತ ನಡೆಸುವ ನಾಯಕರನ್ನು ಸಮಾಜವೇ ಮೂಲೆಗುಂಪು ಮಾಡುತ್ತದೆ ಎಂದರು.

ಕಳೆದ 3 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದೇ ಒಂದು ಹಗರಣವನ್ನೂ ನಡೆಸಿಲ್ಲ.

(ಮೊದಲ ಪುಟದಿಂದ) ಹಿಂದಿನ ಸರ್ಕಾರಗಳು 30 ಲಕ್ಷ ಕೋಟಿಗೂ ಅಧಿಕ ಹಗರಣ ನಡೆಸಿದ್ದವು ಎಂದು ದೂರಿದ ಅವರು, ಪ್ರಸ್ತುತ ಕೇಂದ್ರ ಸರ್ಕಾರ ಸುಧಾರಣೆ, ಪ್ರಗತಿ, ಪಾರದರ್ಶಕವಾಗಿ ಆಡಳಿತ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಪೋಸ್ಟ್ ಆಫೀಸ್‍ಗಳಲ್ಲೂ ಪಾಸ್ ಪೋರ್ಟ್ ಲಭಿಸುವಷ್ಟು ಆಡಳಿತ ಸುಧಾರಣೆಯಾಗಲಿದೆ ಎಂದರು.

ಶಿಕ್ಷಕರ ಪ್ರಕೋಷ್ಠವನ್ನು ಉದ್ಘಾಟಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನೂತನವಾಗಿ ಪಕ್ಷವು ವಿಸ್ತಾರಕ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ವಿಸ್ತಾರಕರಾಗಿ ಹೊರಡುವವರು ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಬೇಕು. ಕೇವಲ 10 ಮಂದಿಯಿಂದ ಸ್ಥಾಪನೆಗೊಂಡ ಬಿಜೆಪಿ ಇಂದು 13 ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿ ವಿಶ್ವದ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿ ಎಂದರು.

ಪಕ್ಷ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರ ಪ್ರಕೋಷ್ಠ ಸ್ಥಾಪನೆಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಸಮಿತಿ ರಚಿಸಲಾಗುವದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಶಿಕ್ಷಕರ ಪ್ರಕೋಷ್ಠದ ತಾಲೂಕು ಅಧ್ಯಕ್ಷ ಜೆ.ಸಿ. ಶೇಖರ್ ವಹಿಸಿದ್ದರು. ವೇದಿಕೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಪಕ್ಷದ ಜಿಲ್ಲಾಧ್ಯಕ್ಷ ಭಾರತೀಶ್, ತಾಲೂಕು ಅಧ್ಯಕ್ಷ ಕುಮಾರಪ್ಪ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಜಿ.ಪಂ. ಸದಸ್ಯೆ ಲೋಕೇಶ್ವರಿ ಗೋಪಾಲ್, ಸದಸ್ಯರುಗಳಾದ ಸರೋಜಮ್ಮ, ಪೂರ್ಣಿಮಾ ಗೋಪಾಲ್, ಬಿ.ಜೆ. ದೀಪಕ್, ಶ್ರೀನಿವಾಸ್, ಮಂಜುಳಾ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಪಕ್ಷದ ಮುಖಂಡರಾದ ಶುಂಠಿ ಸುರೇಶ್, ನಿರ್ವಾಣಿ ಶೆಟ್ಟಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.