ಮಡಿಕೇರಿ, ಜು. 4: ಸುಪ್ರೀಂ ಕೋರ್ಟಿನ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಗೇಟಿನ ಬಳಿ ಇರುವ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು, ಶ್ರದ್ದಾಕೇಂದ್ರಗಳು, ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಸುಮಾರು 25 ಹೆಚ್ಚು ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಚಂದ್ರ ಕಳಗಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು.ಸುಪ್ರೀಂ ಕೋರ್ಟಿನ ಆದೇಶದಂತೆ ರಾಷ್ಟ್ರೀಯ ಹೆದ್ದಾರಿ ಯಿಂದ 220 ಮೀ ಒಳಬಾಗದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶವಿದ್ದರೂ ಕೊಡಗು ಸಂಪಾಜೆ ಗ್ರಾಮದಲ್ಲಿ ಮದ್ಯದಂಗಡಿಗೆ ಯಾರೂ ಕೂಡ ಜಾಗ ಕೊಡುವದಿಲ್ಲ ಮತ್ತು ನಮ್ಮ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಸಭೆಯಲ್ಲಿ ಎಲ್ಲರೂ ಸರ್ವಾನುಮತ ದಿಂದ ಒಪ್ಪಿಗೆ ಸೂಚಿಸಿದರಲ್ಲದೆ, ಮದ್ಯದಂಗಡಿಯನ್ನು ತೆರವು ಗೊಳಿಸಬೇಕೆಂದು ತೀರ್ಮಾನಿಸಿದರು. ಮದ್ಯದಂಗಡಿ ತೆರೆದರೆ ಹೋರಾಟ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಅಧ್ಯಕ್ಷ ಬಾಲಚಂದ್ರ ಕಳಗಿ, ಉಪಾಧ್ಯಕ್ಷ ಸುಂದರ ಬಿ.ಆರ್, ಸದಸ್ಯ ಕುಮಾರ ಚಿದ್ಕಾರು, ಗ್ರಾಮದ ಪ್ರಮುಖರಾದ ಬಿ.ಎ ಗಣಪತಿ, ತಿರುಮಲ ಎಸ್.ಎನ್, ಪುಷ್ಪಾವತಿ ಅವರುಗಳು ಮಾತನಾಡಿ, ಮದ್ಯದಂಗಡಿ ಬೇಡ ಎಂಬದಾಗಿ ಅಭಿಪ್ರಾಯಪಟ್ಟರು. ಜನರ ಜೀವನಮಟ್ಟದಲ್ಲ್ಲಿ ಪರಿಣಾಮ ಬೀರುತ್ತಿದ್ದು, ಅನೇಕ ಅನಾಹುತಗಳಿಗೆ ಕಾರಣವಾಗುವದನ್ನು ತಡೆಯುವದು ನಮ್ಮ ಕರ್ತವ್ಯವಾಗಿದೆ. ರಾಷ್ಟ್ರಪ್ರಶಸ್ತಿ ಪಡೆದುಕೊಂಡ ನಮ್ಮ ಗ್ರಾಮ ಪಂಚಾಯತ್‍ಗೆ ಮದ್ಯದಂಗಡಿ ಬೇಡ ಎಂದು ಒಕ್ಕೊರಲಿನಿಂದ ಅಭಿಪ್ರಾಯಪಟ್ಟರು.