ಕೂಡಿಗೆ, ಜು. 4: ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಮಾಸಿಕ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಅಧ್ಯಕ್ಷರು ಲಂಚ ಪಡೆದ ಆರೋಪದ ಬೆನ್ನಲ್ಲೇ ಅಧ್ಯಕ್ಷರು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಅಧ್ಯಕ್ಷರ ಪುತ್ರ ಕಂಪ್ಯೂಟರ್ ಅನ್ನು ಸ್ವ ಉಪಯೋಗಿಸಿಕೊಂಡು ತೆರಳಿರುವ ವಿಚಾರವಾಗಿ ಗ್ರಾ.ಪಂ ಉಪಾಧ್ಯಕ್ಷರು ಮತ್ತು ಕೆಲವು ಸದಸ್ಯರುಗಳು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿ, ಧರಣಿ ನಡೆಸುತ್ತೇವೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸೋಮವಾರಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಕೂಡಿಗೆ ಗ್ರಾ.ಪಂ ಭೇಟಿ ನೀಡಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಪುತ್ರ ಗ್ರಾ.ಪಂ.ನ ಕಚೇರಿಯ ಕಂಪ್ಯೂಟರ್ ಅನ್ನು ಸ್ವ ಬಳಕೆ ಮಾಡಿಕೊಂಡು, ಅವರಿಗೆ ಬೇಕಾದ ಪತ್ರಗಳನ್ನು ತಯಾರಿಸಿಕೊಂಡಿದ್ದು, ಕಂಪ್ಯೂಟರ್‍ನಲ್ಲಿದ್ದ ಪಂಚಾಯ್ತಿಯ ಕೆಲವು ದಾಖಲೆಗಳನ್ನು ತೆಗೆದುಕೊಂಡು ತೆರಳಿದ್ದಾರೆ. ಕಂಪ್ಯೂಟರ್ ಬಳಕೆ ಮಾಡಿಕೊಂಡಿರುವದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಅಧ್ಯಕ್ಷರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರಿಗೆ ಗ್ರಾ.ಪಂ ಉಪಾಧ್ಯಕ್ಷ ಕೆ.ಟಿ.ಗಿರೀಶ್, ಸದಸ್ಯರುಗಳಾದ ಕೆ.ಜಿ.ಮಂಜಯ್ಯ, ಕೆ.ಜೆ.ಮೋಹಿನಿ, ಕಲ್ಪನಾ, ಜಯಶ್ರೀ, ಧನ್ಯ, ಕೆ.ಟಿ.ಈರಯ್ಯ, ಹೆಚ್.ಎಸ್.ರವಿ, ಪುಷ್ಪ, ಇವರುಗಳು ಸಹಿ ಹಾಕಿದ ಮನವಿ ಪತ್ರವನ್ನು ನೀಡಿದರು.

ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರು ಮನವಿ ಪತ್ರವನ್ನು ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಯವರಿಗೆ ರವಾನಿಸಿ, ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ವಿಷಯ ತಿಳಿಸಲಾಗುವದು ಎಂದರು.